Home ಬೆಂಗಳೂರು ನಗರ ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ

ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ

55
0

ಬೆಂಗಳೂರು:

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ಉತ್ಪಾದಕರು ಮತ್ತು ಗ್ರಾಹಕರ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆಯ 2020-21ರ ಸಾಲಿನ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸಿದರು.

ವರದಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಕೃಷಿ ಬೆಲೆ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.

ಆಯೋಗದ ವರದಿಯಲ್ಲಿ ಕಾರ್ಯಪದ್ಧತಿ, ಉತ್ಪಾದನಾ ವೆಚ್ಚದ ಲೆಕ್ಕಾಚಾರ, ಕೃಷಿ ಪರಿಕರಗಳ ಬಳಕೆ, ಕೃಷಿ ಯಾಂತ್ರೀಕರಣ ಹಾಗೂ ಇಂಧನ ಬೆಲೆ ಏರಿಳಿತದ ಪರಿಣಾಮ, ಕೃಷಿ ಮಾರುಕಟ್ಟೆ ವಸ್ತುಸ್ಥಿತಿ, ಬೆಲೆ ಪ್ರಸರಣ, ರೈತ ಸ್ನೇಹಿ ಬೆಳೆ ವಿಮೆ ಯೋಜನೆಗಳ ಕುರಿತ ವಿಶ್ಲೇಷಣೆ ಹಾಗೂ ಶಿಫಾರಸುಗಳನ್ನು ಮಾಡಲಾಗಿದೆ.

ರಾಜ್ಯದ ಐದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಿರುವ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕಗಳ ಸಹಯೋಗದಲ್ಲಿ ಆಯೋಗವು ಈ ಕಾರ್ಯವನ್ನು ಕೈಗೊಂಡಿದೆ.

Also Read: Agriculture Price Commission submits report to CM Bommai

ಈ ಸಮೀಕ್ಷೆಯಲ್ಲಿ ಅತಿ ಸಣ್ಣ, ಸಣ್ಣ ರೈತರು, ಅರೆ ಮಧ್ಯಮ , ಮಧ್ಯಮ ರೈತರು ಹಾಗೂ ದೊಡ್ಡ ರೈತರೂ ಸೇರಿದಂತೆ ಒಟ್ಟು 1995 ರೈತರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಕೃಷಿ ಯಂತ್ರಗಳಿಂದ ಹಾಗೂ ಸೂಕ್ಷ್ಮ ನೀರಾವರಿಯಿಂದ ಇಳುವರಿ ಸುಸ್ಥಿರಗೊಳಿಸಲು ಸಾಧ್ಯವಾಗಿದೆ ಎಂದು ಆಯೋಗದ ವರದಿ ತಿಳಿಸಿದೆ.

ನಬಾರ್ಡ್ ನಿಯಮಗಳಿಗೆ ಅನುಸಾರವಾಗಿ ಮಾರುಕಟ್ಟೆ ಮೂಲಸಸೌಲಭ್ಯದಡಿ ಹೆಚ್ಚಿನ ಸಂಖ್ಯೆಯ ಗೋದಾಮುಗಳು ಹಾಗೂ ಶೀತಲಗೃಹಗಳನ್ನು ನಿರ್ಮಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ.

ಕೃಷಿ ಬೆಲೆ ಮುನ್ನಂದಾಜು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಮಾಹಿತಿ ನೀಡುವುದರಿಂದ ರೈತರು ಲಾಭದಾಯಕ ಬೆಳೆ ಯೋಜನೆಯನ್ನು ಅನುಸರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗವು ಡ್ಯಾಷ್ ಬೋರ್ಡ್ ತಂತ್ರಾಂಶ ಅಭಿವೃದ್ಧಿ ಪಡಿಸಿದೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ರೈತರ ಆದಾಯ ವೃದ್ಧಿಸಲು ಸಮಗ್ರ ಕೃಷಿ ಪದ್ಧತಿ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಬೇಕಾಗಿದೆ. ಅಂತೆಯೇ ಬೆಳೆ ವಿಮೆ ನೋಂದಣಿಯನ್ನು ಕಡ್ಡಾಯಗೊಳಿಸುವುದು ಹಾಗೂ ಬೆಳೆವಿಮೆ ಯೋಜನೆಯನ್ನು ರೈತಸ್ನೇಹಿಯಾಗಿಸಬೇಕು ಎಂದು ತನ್ನ ಶಿಫಾರಸಿನಲ್ಲಿ ತಿಳಿಸಿದೆ.

ಇದರೊಂದಿಗೆ ಮಣ್ಣು, ನೀರಿನ ಸಂರಕ್ಷಣೆ ಮೊದಲಾದ ವಿಷಯಗಳ ಕುರಿತೂ ಸಹ ಆಯೋಗ ತನ್ನ ಶಿಫಾರಸಿನಲ್ಲಿ ಪ್ರಸ್ತಾಪಿಸಿದೆ.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here