ಎಐ ಆಧಾರಿತ ಡಯಾಲಿಸಿಸ್ ಮಾನಿಟರಿಂಗ್ ವ್ಯವಸ್ಥೆ ಆರಂಭ: ಸುರಕ್ಷಿತ ಚಿಕಿತ್ಸೆಗೆ ಹೊಸ ಹೆಜ್ಜೆ – ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯನ್ನು ಇನ್ನಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನೀಡಲು ಎಐ (AI) ತಂತ್ರಜ್ಞಾನವನ್ನು ಬಳಸುವ ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಎಐ ಆಧಾರಿತ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್ ಅನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಂತಹ ನಗರಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಡಯಾಲಿಸಿಸ್ ಅವಲಂಬಿತ ರೋಗಿಗಳಿಗೆ ಎಐ ತಂತ್ರಜ್ಞಾನ ಒಂದು ವರದಾನವಾಗಲಿದೆ ಎಂದರು.
ಎಐ ಆಧಾರಿತ ಈ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್ ರೋಗಿಗಳ ಸುರಕ್ಷತೆ ಹೆಚ್ಚಿಸುವುದರ ಜೊತೆಗೆ ಡಯಾಲಿಸಿಸ್ ಆರೈಕೆಯನ್ನು ಬಲಪಡಿಸುವ ಅತ್ಯಾಧುನಿಕ ವ್ಯವಸ್ಥೆಯಾಗಿದೆ. ಇದು ನೈಜ-ಸಮಯದ ವೀಡಿಯೊ ವಿಶ್ಲೇಷಣೆ ಮತ್ತು ಡೇಟಾ ಟ್ರ್ಯಾಕಿಂಗ್ ಮೂಲಕ ವಿವಿಧ ಪ್ರಮುಖ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
ಡಯಾಲಿಸಿಸ್ ಚಿಕಿತ್ಸೆ ಅನುಸರಣೆ, ಸೋಂಕು ನಿಯಂತ್ರಣ ಕ್ರಮಗಳು, ಆಸ್ಪತ್ರೆಯಲ್ಲಿ ರೋಗಿಗಳ ಕಾಯುವ ಸಮಯ, ಯಂತ್ರಗಳ ಬಳಕೆ, ಸಿಬ್ಬಂದಿಯ ಸ್ಪಂದನೆ ಮತ್ತು ಉಪಕರಣಗಳ ನೈರ್ಮಲ್ಯತೆ ಸೇರಿದಂತೆ ಹಲವು ಅಂಶಗಳನ್ನು ಈ ವ್ಯವಸ್ಥೆ ಗಮನಿಸುತ್ತದೆ.
ಇದಲ್ಲದೆ, ಸ್ವಯಂಚಾಲಿತ KPI ಟ್ರ್ಯಾಕಿಂಗ್ ಮತ್ತು ಡೇಟಾ ಆಧಾರಿತ ಕ್ಲಿನಿಕಲ್ ನಿರ್ಧಾರಗಳನ್ನು ಸಹ ಈ ಪೋರ್ಟಲ್ ಬೆಂಬಲಿಸುತ್ತದೆ, ಇದರಿಂದ ರೋಗಿಗಳ ಆರೈಕೆ ಇನ್ನಷ್ಟು ನಿಖರ ಮತ್ತು ಪರಿಣಾಮಕಾರಿಯಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ತಂತ್ರಜ್ಞಾನವನ್ನು ಅಳವಡಿಸುವುದು ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ರೋಗಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನೆಫ್ರೋಪ್ಲಸ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
