
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಸ್ವಲ್ಪ ಉಸಿರಾಟದ ತೊಂದರೆ ಅನುಭವಿಸಿದ ನಂತರ ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆ ಮೂಲಗಳ ಪ್ರಕಾರ, ಬಿಪಿ, ಶುಗರ್, ಲಿಪಿಡ್ ಪ್ರೊಫೈಲ್ ಸೇರಿ ಎಲ್ಲಾ ಆರೋಗ್ಯ ಪ್ಯಾರಾಮೀಟರ್ಗಳು ಸಾಮಾನ್ಯವಾಗಿವೆ. ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ನಾಳೆ (ಮಂಗಳವಾರ) ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಆಸ್ಪತ್ರೆಗೆ ಭೇಟಿ ನೀಡಿ ಖರ್ಗೆ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಖರ್ಗೆ ಜಿ ಆರೋಗ್ಯವಾಗಿದ್ದಾರೆ. ಇದು ಕೇವಲ ರೂಟೀನ್ ಚೆಕ್ಅಪ್. ಯಾವುದೇ ಗಂಭೀರ ಸಮಸ್ಯೆ ಇಲ್ಲ. ನಾಳೆ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.
ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂದೆಯ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದೆ ಎಂದು ದೃಢಪಡಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, 82 ವರ್ಷದ ಖರ್ಗೆ ದೇಶದಾದ್ಯಂತ ನಿರಂತರ ಪ್ರವಾಸ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಸ್ವಲ್ಪ ವಿಶ್ರಾಂತಿ ಅಗತ್ಯವಿದೆ. ಎರಡು ದಿನಗಳ ವಿಶ್ರಾಂತಿಯ ನಂತರ ಅವರು ಮತ್ತೆ ತಮ್ಮ ಕಾರ್ಯಕ್ರಮಗಳನ್ನು ಮುಂದುವರಿಸಲಿದ್ದಾರೆ.