Home ರಾಜಕೀಯ Karnataka Congress | ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

Karnataka Congress | ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಲು ಎಐಸಿಸಿಯಿಂದ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

6
0
AICC to organize a program to energize district presidents: DCM D.K. Shivakumar

ನವ ದೆಹಲಿ/ಬೆಂಗಳೂರು, ಮಾ.28 “ಎಐಸಿಸಿಯು ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಿ ಸಂಘಟನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳ ಸಭೆ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

“ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ. ಪಕ್ಷವು ಸರ್ಕಾರಕ್ಕಿಂತ ದೊಡ್ಡದು, ಹೀಗಾಗಿ ಹೈಕಮಾಂಡ್ ನಾಯಕರು ಜಿಲ್ಲಾ ಅಧ್ಯಕ್ಷರಿಗೆ ವಿಶೇಷ ಕಾರ್ಯಕ್ರಮ ನೀಡಿದ್ದಾರೆ” ಎಂದರು.

“ಈ ಸಭೆ ವೇಳೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಪಡೆಯಲಾಯಿತೇ?, ನಿಮ್ಮನ್ನು ವಿಶ್ವಾಸಕ್ಕೆ ಪಡೆದರೆ ಎಂದು ಕೇಳಿದ್ದಾರೆ. ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ” ಎಂದು ಹೇಳಿದರು.

“ಸದಸ್ಯತ್ವ ಅಭಿಯಾನ ಹೇಗೆ ಮಾಡಬೇಕು, ಮತದಾರರ ಪಟ್ಟಿ ಪರಿಶೀಲನೆ, ಬಿಎಲ್ ಓಗಳ ನೇಮಕ, ಸಾಮಾಜಿಕ ಜಾಲತಾಣಗಳ ಪರಿಣಾಮ ಬಳಕೆ, ಪಕ್ಷಕ್ಕೆ ದೇಣಿಗೆ ಸಂಗ್ರಹ ಸೇರಿದಂತೆ ಅನೇಕ ಮಾರ್ಗದರ್ಶನ ನೀಡಿದರು. ಮುಂದೆ ಗುಜರಾತಿನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಶಕ್ತಿ ತುಂಬುವ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

“ಜಿಲ್ಲಾ ಉಸ್ತುವಾರಿ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಜಿಲ್ಲಾ ಪ್ರವಾಸ ಮಾಡುವಾಗ ಜಿಲ್ಲಾ ಅಧ್ಯಕ್ಷರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಅಧ್ಯಕ್ಷರುಗಳು ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ನೀವು ಯಾರ ಮೇಲೂ ಅವಲಂಬಿತರಾಗಬೇಡಿ ನಾವು ನಿಮಗೆ ರಕ್ಷಣೆ ನೀಡುವುದಾಗಿ ಧೈರ್ಯ ತುಂಬಿದರು. ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡಲು ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡಿರುವ ಹೊಸ ಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ” ಎಂದರು.

LEAVE A REPLY

Please enter your comment!
Please enter your name here