ಮೈಸೂರು:
ರಾಜ್ಯದಲ್ಲಿ 100 ಕಿಲೋಮೀಟರ್ ವ್ಯಾಪ್ತಿಗೊಂದು ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂಬತ್ತು ವಿಮಾನ ನಿಲ್ದಾಣಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ರವರು ಉದ್ಘಾಟಿಸಿದರು. ಹಾಸನ ಹಾಗೂ ವಿಜಯಪುರ ವಿಮಾನ ನಿಲ್ದಾಣ ಕಾರ್ಯ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಹಾಗೂ ಚಿಕ್ಕಮಗಳೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು, ಪ್ರತಿ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ವಾಗುವುದರಿಂದ ಪ್ರಯಾಣದ ವೇಳೆ ಕಡಿಮೆಯಾಗುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಕೇಂದ್ರ ಸರ್ಕಾರದ ಭಾರತ್ ಮಾಲಾ ಎರಡನೇ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶ ಯಶಸ್ವಿಯಾಗಿದೆ. ಇದರಿಂದ ರಾಜ್ಯಕ್ಕೆ 9.ಲಕ್ಷ 89 ಸಾವಿರ ಕೋಟಿ ಬಂಡವಾಳ ಹೂಡಲು ಅಂತಾರಾಷ್ಟ್ರೀಯ ಸಂಸ್ಥೆಗಳು ಮುಂದಾಗಿದ್ದಾರೆ.ಈಗಾಗಲೇ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದ 7 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ ಎಲ್ಲಾ ಅಂತರಾಷ್ಟ್ರೀಯ ಸಂಸ್ಥೆಗಳು ರಾಜ್ಯದ ಎರಡನೇ ದರ್ಜೆ ನಗರಗಳಲ್ಲಿ ಹೆಚ್ಚು ಬಂಡವಾಳ ಹೂಡಲು ಮುಂದಾಗಿದ್ದಾರೆ. ಈಗಾಗಲೇ ಮೈಸೂರಿನಲ್ಲಿ 22,500 ಕೋಟಿ ರೂಗಳ ಬಂಡವಾಳದಲ್ಲಿ ಸೆಮಿಕಂಡಕ್ಟರ್ ಯೋಜನೆ ಆರಂಭಗೊಳ್ಳಲಿದೆ ಎಂದರು.
ಮೂಲಭೂತ ಸೌಕರ್ಯ ಒದಗಿಸಲು ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ. ವಿಮಾನ ತಯಾರಿಕೆಗೆ ಬೇಕಾಗಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಒದಗಿಸಿರುವುದರಿಂದ ವಿಮಾನಗಳ ತಯಾರಿಕೆಯಲ್ಲಿ ಇತರ ರಾಜ್ಯಗಳಿಂದ ಕರ್ನಾಟಕ ಮುಂದೆ ಇದ್ದೇವೆ. ಹಸಿರು ವಿದ್ಯುತ್ ಹಾಗೂ ಗಾಳಿ ಇಂದ ಉತ್ಪಾದಿಸುವ ವಿದ್ಯುತ್ ನಿಂದ ನಮ್ಮ ರಾಜ್ಯ ವಿದ್ಯುತ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ವಿದ್ಯುತ್ ತಯಾರಿಕೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಇತರೆ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ದಾರರು ಆಗಮಿಸಿದ್ದಾರೆ.
ಆಯಾಯ ಜಿಲ್ಲೆಗಳಲ್ಲಿ ಸಿಗುವ ಕಚ್ಚಾ ಪದಾರ್ಥಗಳ ಅನುಗುಣವಾಗಿ ಅಲ್ಲಿ ಕಾರ್ಖಾನೆಗಳನ್ನು ತೆರಯಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವುದರಿಂದ ಆ ರೈತರಿಗೆ ಅನುಕೂಲವಾಗಲೆಂದು ಕಲ್ಬುರ್ಗಿಯಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಹಾಗೂ ಬಿಜಾಪುರದಲ್ಲಿ 1000 ಎಕರೆ ಪ್ರದೇಶದಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.