ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ (CEO Karnataka Election Commission) ಅವರು ಅಳಂದ ಕ್ಷೇತ್ರದ ಮತದಾರರ ಅಳಿಕೆ ಪ್ರಕರಣ ಕುರಿತು ವಿವರವಾದ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಎತ್ತಿರುವ ಮತದಾರರ ಅಳಿಕೆ ಆರೋಪಗಳಿಗೆ ಇದರಿಂದ ಸ್ಪಷ್ಟನೆ ಲಭಿಸಿದೆ.
ಸಿಇಒ ಕಚೇರಿಯ ಪ್ರಕಾರ, ಅಳಂದ ವಿಧಾನಸಭಾ ಕ್ಷೇತ್ರದ (46-Aland LAC) ಮತದಾರ ನೋಂದಣಿ ಅಧಿಕಾರಿ (ERO) 2022ರ ಡಿಸೆಂಬರ್ನಲ್ಲಿ Form-7 ಅಡಿಯಲ್ಲಿ 6,018 ಅರ್ಜಿಗಳನ್ನು ಸ್ವೀಕರಿಸಿದ್ದರು. ಈ ಅರ್ಜಿಗಳು NVSP, VHA, GARUDA ಆಪ್ಗಳ ಮೂಲಕ ಸಲ್ಲಿಸಲ್ಪಟ್ಟಿದ್ದವು. ಅಸಮಾನ್ಯ ಸಂಖ್ಯೆಯ ಕಾರಣ ಶಂಕೆ ಹುಟ್ಟಿದ ಹಿನ್ನೆಲೆಯಲ್ಲಿ ERO/AERO/BLO ಗಳಿಂದ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆಯ ಫಲಿತಾಂಶದಲ್ಲಿ, ಕೆವಲ 24 ಅರ್ಜಿಗಳು ಮಾತ್ರ ನಿಜವಾದವು, ಉಳಿದ 5,994 ಅರ್ಜಿಗಳು ತಪ್ಪು ಅಥವಾ ನಕಲಿ ಎಂದು ಪತ್ತೆಯಾಯಿತು. ಪರಿಣಾಮವಾಗಿ 24 ಅರ್ಜಿಗಳನ್ನು ಅಂಗೀಕರಿಸಿ, ಇತರ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಮತದಾರರ ಅಳಿಕೆ ಯಾವುದೇ ರೀತಿಯೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ 2023ರ ಫೆಬ್ರವರಿ 21ರಂದು ಅಳಂದ ಪೊಲೀಸ್ ಠಾಣೆಯಲ್ಲಿ (FIR No.26/2023) ಎಫ್ಐಆರ್ ದಾಖಲಿಸಲಾಗಿದೆ.
2023ರ ಸೆಪ್ಟೆಂಬರ್ 6ರಂದು, ಸಿಇಒ ಅವರು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಹಸ್ತಾಂತರಿಸಿದರು. ಇದರಲ್ಲಿ ಮತದಾರರ Form Reference Number, EPIC ಸಂಖ್ಯೆ, ಲಾಗಿನ್ಗಾಗಿ ಬಳಸಿದ ಮೊಬೈಲ್ ನಂಬರ್, IP ಅಡ್ರೆಸ್, ಅರ್ಜಿ ಸಲ್ಲಿಸಿದ ಸ್ಥಳ ಮತ್ತು ಸಮಯದ ವಿವರಗಳು ಸೇರಿವೆ.
ಸೈಬರ್ ಭದ್ರತಾ ತಜ್ಞರ ಸಹಯೋಗದಲ್ಲಿ ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣದ ಪ್ರಗತಿ ಪರಿಶೀಲನೆ ಕೂಡ ಮಾಡಲಾಗಿದೆ.
ಸಿಇಒ ಕಚೇರಿ ತಿಳಿಸಿರುವಂತೆ, ತನಿಖಾ ಸಂಸ್ಥೆಗೆ ಅಗತ್ಯ ದಾಖಲೆಗಳು, ಮಾಹಿತಿಗಳನ್ನು ನಿರಂತರವಾಗಿ ಒದಗಿಸಲಾಗುತ್ತಿದೆ.
“ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕಾಪಾಡುವುದು, ನಕಲಿ ಅರ್ಜಿಗಳನ್ನು ತಡೆಯುವುದು ಮತ್ತು ಪ್ರಾಮಾಣಿಕ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಚುನಾವಣಾ ಆಯೋಗದ ಆದ್ಯತೆ,” ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ.
