ಬೆಂಗಳೂರು, ಜನವರಿ 19: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳ ನಡುವೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಎಲ್ಲಾ 140 ಕಾಂಗ್ರೆಸ್ ಶಾಸಕರು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷದ ಒಳಗಿನ ಚರ್ಚೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದೂ ಅವರು ಖಡಕ್ ಸಂದೇಶ ನೀಡಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾಯಕತ್ವ ವಿಚಾರವಾಗಿ ತಮ್ಮ ಮತ್ತು ಪಕ್ಷದ ಹಿರಿಯ ನಾಯಕರ ನಡುವಿನ ಮಾತುಕತೆಗಳು ಆಂತರಿಕವಾಗಿದ್ದು, ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ವೇ ತೆಗೆದುಕೊಳ್ಳಲಿದೆ ಎಂದು ಹೇಳಿದರು.
“ಎಲ್ಲಾ 140 ಶಾಸಕರು ನನ್ನ ಬೆಂಬಲದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನನ್ನ ಜೊತೆಯಲ್ಲಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ಏನು ಚರ್ಚೆ ಮಾಡಿದ್ದೇವೆ? ರಾಹುಲ್ ಗಾಂಧಿ ಜೊತೆ ಏನು ಮಾತನಾಡಿದ್ದೇವೆ? ಅದು ನಮಗೆ ಮಾತ್ರ ಗೊತ್ತು. ಅದನ್ನು ನಿಮ್ಮ ಮುಂದೆ ಹೇಳಲು ಸಾಧ್ಯವೇ? ಎಲ್ಲ ಪ್ರಶ್ನೆಗಳಿಗೆ ಸಮಯವೇ ಉತ್ತರ ಕೊಡಲಿದೆ,” ಎಂದು ಡಿಕೆಶಿ ಹೇಳಿದರು.
‘ಗೊಂದಲ ಸೃಷ್ಟಿಸುತ್ತಿರುವುದು ಮಾಧ್ಯಮಗಳೇ’
ಇತ್ತೀಚಿನ ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿಲ್ಲ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಾಧ್ಯಮಗಳ ವರದಿಗಳಲ್ಲಿನ ವೈರುಧ್ಯವನ್ನು ಪ್ರಶ್ನಿಸಿದರು.
“ನಾವು ದೆಹಲಿಗೆ ಹೋಗುವುದು ಪಕ್ಷದ, ರಾಜಕೀಯ ಮತ್ತು ಆಡಳಿತ ಸಂಬಂಧಿತ ಕೆಲಸಗಳಿಗೆ. ಕರ್ನಾಟಕ, ಅಸ್ಸಾಂ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ. ಒಂದು ದಿನ ಮಾಧ್ಯಮಗಳು ನನ್ನ ಮತ್ತು ರಾಹುಲ್ ಗಾಂಧಿ ಜೊತೆಗಿನ ಫೋಟೋ ಪ್ರಕಟಿಸುತ್ತವೆ, ಮತ್ತೊಂದು ದಿನ ಭೇಟಿಯಾಗಿಲ್ಲ ಎಂದು ವರದಿ ಮಾಡುತ್ತವೆ. ನಾನು ಈಗಾಗಲೇ ಹೇಳಿದ್ದೇನೆ – ಸಮಯವೇ ಉತ್ತರ ಕೊಡಲಿದೆ. ಇದನ್ನು ಇನ್ನಷ್ಟು ಚರ್ಚಿಸುವುದಿಲ್ಲ,” ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಗೊಂದಲವಿದೆ ಎಂಬ ಮಾತುಗಳನ್ನು ಡಿಕೆ ಶಿವಕುಮಾರ್ ತಳ್ಳಿ ಹಾಕಿದರು.
“ನಾಯಕತ್ವ ಕುರಿತು ಯಾವುದೇ ಗೊಂದಲವಿಲ್ಲ. ಗೊಂದಲ ಸೃಷ್ಟಿಸುತ್ತಿರುವುದು ನೀವು (ಮಾಧ್ಯಮಗಳು). ಹೈಕಮಾಂಡ್ ತೀರ್ಮಾನವೇ ಅಂತಿಮ. ಅದನ್ನು ನಾವು ಎಲ್ಲರೂ ಪಾಲಿಸುತ್ತೇವೆ. ಈ ವಿಚಾರವನ್ನು ನಾನು ಮತ್ತು ಸಿಎಂ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಕಾಂಗ್ರೆಸ್ ಒಗ್ಗಟ್ಟಾಗಿದೆ. ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನಗಳನ್ನು ನಾವು ಪಾಲಿಸುತ್ತೇವೆ,” ಎಂದು ಅವರು ಹೇಳಿದರು.
‘ಸಿಎಂ ಮತ್ತು ನಾನು ಒಂದೇ ನಿಲುವಿನಲ್ಲಿ’
ದೆಹಲಿಯಲ್ಲಿನ ಸಭೆಗಳ ಫಲಿತಾಂಶ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಮತ್ತು ತಾವು ಒಂದೇ ನಿಲುವಿನಲ್ಲಿರುವುದಾಗಿ ಹೇಳಿದರು.
“ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಸಿಎಂ ಮತ್ತು ನಾನು ಒಪ್ಪಿಕೊಂಡಿದ್ದೇವೆ. ನಿಮಗೆ ನಿಮ್ಮ ಟಿಆರ್ಪಿ ಹೆಚ್ಚು ಮುಖ್ಯವಾಗಿದೆ,” ಎಂದು ಮಾಧ್ಯಮಗಳ ಮೇಲೆ ವ್ಯಂಗ್ಯವಾಡಿದರು.
ಶಾಸಕರು ತಮ್ಮ ತಮ್ಮ ಆಶಯಗಳನ್ನು ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ಶಾಸಕರಿಗೆ ಆಸೆಗಳು ಇರುವುದು ಸಹಜ. ಅದರಲ್ಲಿ ತಪ್ಪೇನಿಲ್ಲ. ಅವರು ಕಾಯುತ್ತಿರಬಹುದು,” ಎಂದು ಹೇಳಿದರು.
‘ಪಕ್ಷವನ್ನು ಕಟ್ಟಿದ್ದು ಕಾರ್ಯಕರ್ತರು’
ತಾವು ಪಕ್ಷಕ್ಕಾಗಿ ಹೆಚ್ಚು ಶ್ರಮಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಪಕ್ಷದ ಕಾರ್ಯಕರ್ತರ ಪಾತ್ರವನ್ನು ನೆನಪಿಸಿದರು.
“ಪಕ್ಷಕ್ಕಾಗಿ ನಾನು ಮಾತ್ರ ಶ್ರಮಪಟ್ಟಿಲ್ಲ. 224 ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರು ರಾತ್ರಿ ಹಗಲು ದುಡಿದಿದ್ದಾರೆ. ಕೋವಿಡ್ ಸಮಯದಲ್ಲಿ ಅವರ ಸೇವೆ ಅಪಾರ. ಜನ, ಮಾಧ್ಯಮ, ಬಿಜೆಪಿ ಮತ್ತು ಜೆಡಿಎಸ್ ಕೆಲವರು ನನ್ನ ಪರ ಪ್ರಾರ್ಥಿಸುತ್ತಿದ್ದಾರೆ, ಕೆಲವರು ಟೀಕಿಸುತ್ತಿದ್ದಾರೆ,” ಎಂದು ಹೇಳಿದರು.
