ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಲ್ಲಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಸರಕಾರಿ ಭೂಮಿ ಒತ್ತುವರಿ ಮಾಡಿದ ಆರೋಪ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ಚುರುಕುಗೊಳಿಸಲಾಗಿದೆ.
ಸೋಮವಾರ ಕಂದಾಯ ನಿರೀಕ್ಷಕ ಪ್ರಕಾಶ್, ವಿಶಾಲಾಕ್ಷಿ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸರ್ವೇ ನಂಬರ್ ಗಳ ಜಮೀನುಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಶೀಘ್ರದಲ್ಲಿಯೇ ರಾಮನಗರ ಜಿಲ್ಲಾಧಿಕಾರಿಗೆ ಕಂದಾಯ ಅಧಿಕಾರಿಗಳು ವರದಿ ನೀಡಲಿದ್ದಾರೆ.
ಕುಮಾರಸ್ವಾಮಿ ಮತ್ತು ಅವರ ಸಹೋದರಿ ಅನಸೂಯ ಮಂಜುನಾಥ್, ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಹೆಸರಿನಲ್ಲಿರುವ ಭೂಮಿಯಲ್ಲಿ 14 ಎಕರೆ ಸರಕಾರಿ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರರೊಬ್ಬರು ದೂರು ಸಲ್ಲಿಸಿದ್ದರು. ಈ ಆರೋಪದ ಬಗ್ಗೆ ತನಿಖೆಗಾಗಿ ಎಸ್‍ಐಟಿ ರಚನೆ ಮಾಡಲಾಗಿತ್ತು.
ಆದರೆ, ತನಿಖಾ ತಂಡ ವರದಿ ನೀಡುವುದು ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ತಾಕೀತು ಮಾಡಿ ಶೀಘ್ರ ವರದಿ ನೀಡುವಂತೆ ಇತ್ತೀಚಿಗೆ ಕಂದಾಯ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆಯ ಬೆನ್ನಲ್ಲೇ ಕಂದಾಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದಾರೆ.