ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ಬಿಸಿಎಂ(ಪುರುಷ) ಹಾಸ್ಟೆಲ್‍ನಲ್ಲಿ ಕಳಪೆ ಊಟ ಸೇವಿಸಿ 10ರಿಂದ 15 ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಇದನ್ನು ಖಂಡಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಗೌತಮ್ ಮಾತನಾಡಿ, ‘ಬಿಸಿಎಂ ಹಾಸ್ಟಲ್‍ನಲ್ಲಿ ಕಳಪೆ ಊಟ-ಉಪಹಾರ ವಿತರಣೆಯಿಂದ ಪ್ರತಿದಿನ ಸಮಸ್ಯೆ ಸೃಷ್ಟಿಯಾಗುತ್ತಿದೆ. ರವಿವಾರ ಊಟ ಸೇವಿಸಿದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಹಾಸ್ಟೆಲ್‍ನಲ್ಲಿ ಸಿಬ್ಬಂದಿಗಳು ಬೇಕಾಬಿಟ್ಟಿ ಅಡುಗೆ ಮಾಡುತ್ತಾರೆ. ಅಲ್ಲದೆ ವಿದ್ಯಾರ್ಥಿಗಳು ತಟ್ಟೆಗೆ ಹಾಕಿಕೊಂಡ ಊಟ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಶೇ.80ರಷ್ಟು ಬಿಸಾಕುತ್ತಾರೆ. ಈ ಸಮಸ್ಯೆಯನ್ನು ನಿಲಯಪಾಲಕರ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಬಿಸಿಎಂ ಹಾಸ್ಟಲ್‍ಗೆ ಹೋಗುವ ದಾರಿಯಲ್ಲಿ ಬೀದಿ ದೀಪಗಳಿಲ್ಲದೆ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಂದು ತಿಂಗಳಿನಲ್ಲಿ 5 ವಿದ್ಯಾರ್ಥಿಗಳಿಗೆ ನಾಯಿ ಕಚ್ಚಿದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.
ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೂಡಲೇ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಿಲಯ ಪಾಲಕರನ್ನು ಕೂಡಲೇ ಬದಲಾವಣೆ ಮಾಡಬೇಕು. ಅಲ್ಲದೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.