ಬೆಂಗಳೂರು:
ರಾಜ್ಯದ ಚುನಾವಣಾ ಪ್ರಕ್ರಿಯೆಯಲ್ಲಿ ಧಾರ್ಮಿಕ ಹಕ್ಕುಗಳನ್ನು ನಿರ್ವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಇಂದು ಮನವಿ ನೀಡಿದ ಬಳಿಕ ಮಾತನಾಡಿದ ಅವರು, ಸಂವಿದಾನದ 25ನೆ ವಿಧಿ ಪ್ರಕಾರ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಆದರೆ, ಚುನಾವಣಾ ಆಯೋಗ ಪ್ರಸಾದ ವಿನಿಯೋಗ ಮಾಡಲು ತಡೆಯೊಡ್ಡಿದೆ ಎಂದು ಗಮನ ಸೆಳೆದರು.
ಉ.ಕ ದಲ್ಲಿ, ಕರಾವಳಿಯಲ್ಲಿ, ಎಲ್ಲೆಡೆ ಜಾತ್ರೆ ಆರಂಭವಾಗಿದೆ. ದೈವಾರಾಧನೆ, ಪ್ರಸಾದ ವಿತರಣೆ ಇದೆ. ಆದ್ದರಿಂದ ಇವುಗಳಿಗೆ ತಡೆ ಆಗದಂತೆ ಚುನಾವಣಾ ಆಯೋಗ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಅನ್ನ ಪ್ರಸಾದ ವಿನಿಯೋಗ ಇರಲಿದೆ. ಅನ್ನದಾನ ಮಾಡುವುದಾಗಿ ಬಹಳ ವರ್ಷ ಹಿಂದೆಯೇ ಅನ್ನ ಪ್ರಸಾದ ವಿನಿಯೋಗ ಮಾಡಲು ನಿರ್ಧಾರ ಮಾಡಿರುತ್ತಾರೆ. ದೂರದ ಪ್ರದೇಶದಿಂದ ಬರುವ ಭಕ್ತರಿಗೆ ಅವಕಾÀಶ ನೀಡಬೇಕಿದೆ. ಊಟ ಪ್ರಸಾದ, ಅನ್ನ ಪ್ರಸಾದ ಕೊಡಲು ಅನುವು ಮಾಡಿಕೊಡಲು ಮನವಿ ಮಾಡಿದ್ದಾಗಿ ತಿಳಿಸಿದರು.
ರ್ಯಾಲಿ, ರೋಡ್ ಶೋ ಗೆ ಅನುಮತಿ ಕೊಡುತ್ತಿಲ್ಲ. 24 ಗಂಟೆಯಲ್ಲಿ ಅನುಮತಿ ಕೊಡಬೇಕು. ಆದರೆ, ವಾರಗಟ್ಟಲೆ ಅನುಮತಿ ಕೊಡುತ್ತಿಲ್ಲ. ರಾಷ್ಟ್ರೀಯ ನಾಯಕರ ಕಾರುಗಳಿಗೆ ಸಂಚಾರ ಮಾಡಲು ಅನುಮತಿ ನೀಡುತ್ತಿಲ್ಲ. ಇದಲ್ಲದೆ, ಮಾಧ್ಯಮದವರಿಗೂ ಇಂದು ಸಮಸ್ಯೆ ಆಗಿದೆ. ಇದೆಲ್ಲ ಸಮಸ್ಯೆ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.