ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್ ಬಳಿ ಇರುವ ಫಕೀರ್ ಕಾಲೋನಿ ಮತ್ತು ವಾಸೀಮ್ ಬಡಾವಣೆಗಳಲ್ಲಿ ಬಹುತೇಕ ನೂರಕ್ಕೆ ಶೇ.95ರಷ್ಟು ಮನೆ-ಗುಡಿಸಲುಗಳು ಕಳೆದ ಎರಡು ವರ್ಷಗಳಲ್ಲಿಯೇ ನಿರ್ಮಾಣವಾಗಿವೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ. ಈ ಮೂಲಕ ಇವು ಹಳೆಯ ಬಡಾವಣೆಗಳು ಎಂಬ ವಾದವನ್ನು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ವತಿಯಿಂದ ರಚಿಸಲಾದ ಸತ್ಯಶೋಧನಾ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಮನೆ-ಗುಡಿಸಲುಗಳ ನೆಲಸಮ, ನಿರ್ಮಾಣ ಅವಧಿ ಹಾಗೂ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದೆ. “ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಇಲ್ಲಿ ನಿರ್ಮಾಣಗೊಂಡ ಬಹುತೇಕ ಮನೆಗಳು ಇತ್ತೀಚಿನ ವರ್ಷಗಳದ್ದೇ,” ಎಂದು ವಿಶ್ವನಾಥ್ ಹೇಳಿದರು.
ಕೋಗಿಲು ಬಡಾವಣೆ ಕುರಿತಾಗಿ ವಿಸ್ತೃತ ವರದಿಯನ್ನು ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು, ಆ ವರದಿಯಲ್ಲಿ ಬಿಬಿಎಂಪಿಗೆ ಜಾಗ ಹಸ್ತಾಂತರಗೊಂಡ ದಾಖಲೆಗಳು, ಸರ್ವೇ ನಂಬರ್ಗಳು, ಗೂಗಲ್ ಮ್ಯಾಪ್ ಚಿತ್ರಣ, ಕಾನೂನು ಅಂಶಗಳು ಹಾಗೂ ಇತರೆ ದಾಖಲೆಗಳು ಒಳಗೊಂಡಿರುತ್ತವೆ ಎಂದರು. ರಾಜ್ಯಾಧ್ಯಕ್ಷರು ಈ ವರದಿಯನ್ನು ಮಾನ್ಯ ರಾಜ್ಯಪಾಲರಿಗೆ ಸಲ್ಲಿಸುವುದು ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಮನೆಗಳ ನಿಯಮಿತಗೊಳಿಸುವಿಕೆ ಅಥವಾ ಪರಿಹಾರದ ಹೆಸರಿನಲ್ಲಿ ನಡೆಯುತ್ತಿರುವ ಕ್ರಮಗಳು ಮತದ ರಾಜಕಾರಣದ ಭಾಗ ಎಂದು ವಿಶ್ವನಾಥ್ ಆರೋಪಿಸಿದರು. “ನೆರೆ ಪರಿಹಾರ ಸಂತ್ರಸ್ತರು, ರಾಜಕಾಲುವೆಗಳ ಮೇಲೆ ಮನೆ ಕಟ್ಟಿಕೊಂಡು ತೆರವುಗೊಳಿಸಲ್ಪಟ್ಟವರಿಗೆ ಇನ್ನೂ ಮನೆ ಸಿಕ್ಕಿಲ್ಲ. ಆದರೆ ಇಲ್ಲಿ ಇತ್ತೀಚೆಗೆ ನಿರ್ಮಿತ ಮನೆಗಳಿಗೆ ವಿಶೇಷ ಕಾಳಜಿ ತೋರುತ್ತಿದ್ದಾರೆ,” ಎಂದು ಅವರು ಟೀಕಿಸಿದರು.
ಜನವರಿ 5ರಂದು ಕೋಗಿಲು ಬಡಾವಣೆಯಲ್ಲೇ ದೊಡ್ಡ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದ ಅವರು, ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮದಡಿ ಅರ್ಜಿ ಹಾಕಿರುವವರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು. “ಅಗತ್ಯವಿದ್ದರೆ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲೇರಲಾಗುತ್ತದೆ,” ಎಂದು ಹೇಳಿದರು.
ವಾಸೀಮ್ ವಿರುದ್ಧ ಗಂಭೀರ ಆರೋಪ
ವಾಸೀಮ್ ಬಡಾವಣೆಯನ್ನು ನಿರ್ಮಿಸಿದ ವ್ಯಕ್ತಿ ಹಣ ಪಡೆದು ಅಕ್ರಮವಾಗಿ ಮನೆಗಳನ್ನು ಒಪ್ಪಂದದಡಿ ನೀಡಿದ್ದಾನೆ ಎಂಬ ಆರೋಪವನ್ನು ವಿಶ್ವನಾಥ್ ಮಾಡಿದರು. “ವಾಸೀಮ್ ಆಗಿರಲಿ, ವಿಶ್ವನಾಥ್ ಆಗಿರಲಿ – ನೂರಾರು ಜನರಿಗೆ ಮೋಸ ಮಾಡಿದವನನ್ನು ಜೈಲಿಗೆ ಹಾಕಬೇಕು,” ಎಂದು ಅವರು ಹೇಳಿದರು. ಈ ವ್ಯಕ್ತಿ ಕಾಂಗ್ರೆಸ್ನ ಸ್ಥಳೀಯ ನಾಯಕರು ಹಾಗೂ ಸಚಿವರಿಗೆ ಹತ್ತಿರದವನು ಎಂಬ ಆರೋಪವನ್ನೂ ಮಾಡಿದರು.
“₹3.5 ಲಕ್ಷದಿಂದ ₹4 ಲಕ್ಷಕ್ಕೆ ಗುಡಿಸಲು ಕಟ್ಟಿಸಿಕೊಡುತ್ತೇವೆ ಎಂದು ಹೇಳಿರುವ ಧ್ವನಿಮುದ್ರಿಕೆಗಳು ನಮ್ಮ ಬಳಿ ಇವೆ. ಕೆಲವು ಬಾಡಿಗೆ ಮನೆಗಳನ್ನೂ ನೀಡಲಾಗಿದೆ. ಆದರೆ ಇವನ ವಿರುದ್ಧ ಒಂದೇ ಒಂದು ಕೇಸ್ ಕೂಡ ದಾಖಲಾಗಿಲ್ಲ,” ಎಂದು ವಿಶ್ವನಾಥ್ ಆರೋಪಿಸಿದರು. ಆಧಾರ್ ಕಾರ್ಡ್ ಮತ್ತು ಮತದಾರರ ಗುರುತುಚೀಟಿಗಳ ವಿಚಾರದಲ್ಲಿಯೂ ಅಕ್ರಮ ನಡೆದಿದೆ ಎಂದು ಹೇಳಿ, ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.
ಕಾನೂನು ಅರ್ಹತೆ ಬಗ್ಗೆ ಪ್ರಶ್ನೆ
ಅಧಿಕಾರಿಗಳೇ ಹೇಳುವಂತೆ, 250 ಜನರು ಇಲ್ಲಿದ್ದೇವೆ ಎಂದು ಹೇಳಿಕೊಂಡರೂ, ಕೇವಲ ಸುಮಾರು 40 ಮನೆಗಳ ವಿವರಗಳಷ್ಟೇ ದಾಖಲೆಗಳಲ್ಲಿ ಲಭ್ಯವಿವೆ ಎಂದು ವಿಶ್ವನಾಥ್ ಹೇಳಿದರು. ಸೆಕ್ಷನ್ 94-ಸಿ (CC) ಅಡಿ ಮನೆ ಪಡೆಯಬೇಕಾದರೆ 2015ರ ಮೊದಲೇ ಮನೆ ನಿರ್ಮಾಣವಾಗಿರಬೇಕು ಮತ್ತು ಅರ್ಜಿ ಸಮಯಕ್ಕೆ ಸಲ್ಲಿಸಿರಬೇಕು ಎಂದು ಅವರು ವಿವರಿಸಿದರು. ಹಸ್ತಾಂತರಗೊಂಡ ಜಾಗದಲ್ಲಿ ನಡೆದ ತೆರವು ಕಾರ್ಯಕ್ಕೆ ಈ ನಿಯಮದಡಿ ಮನೆ ನೀಡಲಾಗುವುದಿಲ್ಲ ಎಂದರು.
ಬೈಯಪ್ಪನಹಳ್ಳಿಯಲ್ಲಿ ಪ್ರಸ್ತಾಪಿಸಲಾಗಿರುವ ಅಪಾರ್ಟ್ಮೆಂಟ್ ಮನೆಗಳ ಬಗ್ಗೆ ಮಾತನಾಡಿದ ಅವರು, ಎಸ್+12 ಮಹಡಿ, ಲಿಫ್ಟ್ ಇರುವ ಮನೆಗಳಿಗೆ ಕನಿಷ್ಠ ₹500–600 ನಿರ್ವಹಣಾ ವೆಚ್ಚ ಬರುತ್ತದೆ. “ಜೆರಾಕ್ಸ್ಗೆ ಹಣ ಇಲ್ಲ ಎನ್ನುವ ಬಡವರು ಇದನ್ನು ಹೇಗೆ ನಿಭಾಯಿಸುತ್ತಾರೆ?” ಎಂದು ಪ್ರಶ್ನಿಸಿದರು.
ಬಿಬಿಎಂಪಿಯಿಂದ ₹5 ಲಕ್ಷ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ₹2.5 ಲಕ್ಷ ನೀಡುವುದಾಗಿ ಹೇಳಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿ, “ಇಂತಹ ಹಣವನ್ನು ಇಚ್ಛೆಯಂತೆ ಕೊಡಲು ಸಾಧ್ಯವಿಲ್ಲ. ಸರ್ಕಾರ ಜನರ ಕಿವಿಯಲ್ಲಿ ಹೂವು ಇಡುತ್ತಿದೆ,” ಎಂದು ದೂರಿದರು.
ಈ ಸತ್ಯಶೋಧನಾ ತಂಡದಲ್ಲಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಶಾಸಕರಾದ ಮುನಿರಾಜ್, ಕೆ.ಎಸ್. ನವೀನ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
