ಬೆಂಗಳೂರು: ಕರ್ನಾಟಕ ಜೈಲು ಮತ್ತು ತಿದ್ದುಪಡಿ ಸೇವೆಗಳ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ (DGP) ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ (ಅಲೋಕ್ ಠಾಕೂರ್) ಗುರುವಾರ ಅಧಿಕಾರ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಶಿಸ್ತಿಗೆ, ಪಾರದರ್ಶಕತೆಗೆ ಮತ್ತು ಕಠಿಣ ಭದ್ರತಾ ಕ್ರಮಗಳಿಗೆ ಕಟ್ಟುಬದ್ದಗೊಳಿಸುವುದಾಗಿ ಘೋಷಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು, ಮೊಬೈಲ್–ಡ್ರಗ್ಸ್ ಸ್ಮಗ್ಲಿಂಗ್, ಒಳಗಡೆ ನಿಷೇಧಿತ ವಸ್ತುಗಳ ಪ್ರವೇಶ ಸೇರಿದಂತೆ ಯಾವುದೇ ತಪ್ಪಿಗೆ ಶೂನ್ಯ ಸಡಿಲಿಕೆ ನೀತಿ ಅನುಸರಿಸಲಾಗುತ್ತದೆ ಎಂದರು.

“ಜೈಲುಗಳ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ತಿದ್ದುಪಡಿ ಸೇವೆಗಳ ಮೂಲ ಉದ್ದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ನಮ್ಮ ಮೊದಲ ಆದ್ಯತೆ,” ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಭದ್ರತಾ ಪ್ರೋಟೋಕಾಲ್ಗಳ ಸಮಗ್ರ ಪುನರ್ ಪರಿಶೀಲನೆ ಕೂಡ ಕೈಗೊಳ್ಳಲಾಗುತ್ತದೆ ಎಂದು ಅವರು ಸೂಚಿಸಿದರು.
ಕಳೆದ ಕೆಲವು ತಿಂಗಳಲ್ಲಿ ರಾಜ್ಯ ಜೈಲುಗಳಲ್ಲಿ ನಡೆದ ಪ್ರಕರಣಗಳ ಹಿನ್ನೆಲೆಯಲ್ಲಿ, ಇಲಾಖೆಯು ಸಿಸಿಟಿವಿ ಮೇಲ್ವಿಚಾರಣೆ, ಡಿಜಿಟಲ್ ಟ್ರಾಕಿಂಗ್ ವ್ಯವಸ್ಥೆ, ಜೈಲು ಸಿಬ್ಬಂದಿಗೆ ತರಬೇತಿ, ಹಾಗೂ ಬಂಧಿತರ ಪುನರ್ವಸತಿ ಕಾರ್ಯಕ್ರಮಗಳ ಬಲಪಡಿಸುವತ್ತ ಗಮನ ಹರಿಸುತ್ತಿದೆ.
ಹೊಸ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡಿರುವುದು ಕರ್ನಾಟಕ ಜೈಲು ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಮತ್ತು ಆಡಳಿತ ಶಿಸ್ತು ತರಲಿದೆ ಎಂಬ ನಿರೀಕ್ಷೆ ಅಧಿಕಾರಿಗಳಲ್ಲಿದೆ.
