ರಾಯಚೂರು, ಜನವರಿ 3: “ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ತಾಯಿಯ ದರ್ಶನವಾಗಿರುವುದು ನನ್ನ ಪುಣ್ಯ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ಶ್ರೀ ಅಂಬಾಮಠ ಆವರಣದಲ್ಲಿ ಆಯೋಜಿಸಲಾದ ಶ್ರೀ ಅಂಬಾ ಮಹೋತ್ಸವ–2026 ಜಾತ್ರಾ ಮಹೋತ್ಸವ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಲಗುಂದಾ ಏತ ನೀರಾವರಿ, ಮಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು
ನೀರಾವರಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ವಿವಿಧ ನಿಗಮಗಳ ಮೂಲಕ ₹176 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಸಾಲಗುಂದಾ ಏತ ನೀರಾವರಿಗೆ ₹71 ಕೋಟಿ, ಮಳ್ಳೂರು ಏತ ನೀರಾವರಿಗೆ ₹21 ಕೋಟಿ, ಹಾಗೂ ಒಳಬಳ್ಳಾರಿ ಏತ ನೀರಾವರಿಗೆ ₹43 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಒಟ್ಟು 42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಗುರಿಯೊಂದಿಗೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ತಲುಪಿದೆ; ಉಳಿದ 12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಕೆಲಸ ವಿವಿಧ ಹಂತಗಳಲ್ಲಿ ಸಾಗುತ್ತಿದೆ ಎಂದರು.
ಮೊದಲ ಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ, ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
— CM of Karnataka (@CMofKarnataka) January 3, 2026
ನಾವು ಅಧಿಕಾರಕ್ಕೆ ಬಂದ ಮೇಲೆ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳಡಿ ₹176… pic.twitter.com/qdaxgFRo0g
ತುಂಗಭದ್ರಾ ಕಾಮಗಾರಿಗಳು
ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ₹431 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ತುಂಗಭದ್ರಾ ಜಲಾಶಯದಲ್ಲಿ 33 ಹೊಸ ಗೇಟ್ಗಳ ಅಳವಡಿಕೆ ನಡೆಯುತ್ತಿದೆ. “ಜೂನ್ ಒಳಗೆ ಈ ಕೆಲಸ ಮುಗಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು. ಎಷ್ಟೇ ವೆಚ್ಚವಾದರೂ ಹೊಸ ಗೇಟ್ಗಳನ್ನು ಅಳವಡಿಸಿ ನೀರು ನೀಡುತ್ತೇವೆ,” ಎಂದು ಭರವಸೆ ನೀಡಿದರು.
‘ಅಭಿವೃದ್ಧಿಗೆ ಹಣವಿಲ್ಲ ಎನ್ನುವುದು ಸುಳ್ಳು’
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಇಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಗ್ಯಾರಂಟಿಗಳಿಗೆ ₹1.12 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದರು. ಶಕ್ತಿ ಯೋಜನೆ ಅಡಿ 643 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದು, ಸುಮಾರು ₹16 ಸಾವಿರ ಕೋಟಿ ವೆಚ್ಚವಾಗಿದೆ. “ಈ ವರ್ಷ ಮಾತ್ರವೇ ₹52 ಸಾವಿರ ಕೋಟಿ ವೆಚ್ಚವಾಗಿದೆ,” ಎಂದು ಹೇಳಿದರು.
ಹಸಿರು ವಲಯ ಹೆಚ್ಚಳ, ಕೇಂದ್ರದ ವಿಳಂಬದ ಟೀಕೆ
ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿರುವುದರಿಂದ, ನೀರಾವರಿ ವಿಸ್ತರಣೆ ಮೂಲಕ ಹಸಿರು ವಲಯ ಹೆಚ್ಚಿಸುವುದು ನಮ್ಮ ಉದ್ದೇಶ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ; 173 ಟಿಎಂಸಿ ನೀರನ್ನು ಬಳಸಬೇಕಿದೆ ಎಂದು ಒತ್ತಾಯಿಸಿದರು. “ನುಡಿದಂತೆ ನಡೆಯುವ ಸರ್ಕಾರ ನಮ್ಮದು,” ಎಂದರು.
ಕಟ್ಟಕಡೆಯ ರೈತರಿಗೆ ನೀರಿನ ಭರವಸೆ
ನೀರಾವರಿ ಯೋಜನೆಗಳನ್ನು ವೇಗಗೊಳಿಸಿ ಕಟ್ಟಕಡೆಯ ಭಾಗದ ರೈತರಿಗೆ ನೀರು ತಲುಪಿಸುವುದು ನಮ್ಮ ಗುರಿ ಎಂದು ಹೇಳಿದರು. ದೇವಸ್ಥಾನ ಅಭಿವೃದ್ಧಿಗೆ ₹6.30 ಕೋಟಿ ಮಂಜೂರಾಗಿದ್ದು, ಇದರಲ್ಲಿ ₹2 ಕೋಟಿ ಈಗಾಗಲೇ ವೆಚ್ಚವಾಗಿದೆ; ಉಳಿದ ಅನುದಾನವನ್ನೂ ಬಿಡುಗಡೆ ಮಾಡಲಾಗುವುದು ಎಂದರು.
VB G RAM G ವಿರುದ್ಧ ತೀವ್ರ ವಿರೋಧ
ಕೇಂದ್ರ ಸರ್ಕಾರ ಮ-ನರೇಗಾಯನ್ನು ಬದಲಿಸಿ ಜಾರಿಗೆ ತಂದಿರುವ VB G RAM G ಕಾಯ್ದೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದರು. “ಈ ಹೊಸ ಕಾಯ್ದೆ ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರಿಗೆ ತೊಡಕುಂಟು ಮಾಡುತ್ತದೆ. VB G RAM G ರದ್ದು ಮಾಡಿ, ಮ-ನರೇಗಾ ಪುನರ್ಸ್ಥಾಪನೆ ಆಗಬೇಕು,” ಎಂದು ಆಗ್ರಹಿಸಿದರು. ಹಿಂದಿನ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಪೂರ್ಣ ಅನುದಾನ ನೀಡುತ್ತಿತ್ತು; ಈಗ 60% ಕೇಂದ್ರ–40% ರಾಜ್ಯ ಅನುದಾನ ಮಾದರಿ ಸೂಕ್ತವಲ್ಲ ಎಂದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೊಳಿಸಿದ್ದ ಜನಪರ ಕಾಯ್ದೆಯ ಸ್ವರೂಪವೇ ಬದಲಾಗಿದೆ ಎಂದು ಟೀಕಿಸಿದರು.
