ಬೆಂಗಳೂರು: 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (2ನೇ ತಿದ್ದುಪಡಿ) ಕುರಿತು ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಜಿಬಿಎ ಸದಸ್ಯರ ಪಟ್ಟಿಯಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹೆಸರು ಸೇರಿಸುವುದು, ನಾಮನಿರ್ದೇಶಿತ ಸದಸ್ಯತ್ವ, ಮತದಾನದ ಹಕ್ಕು ಸೇರಿದಂತೆ ಹಲವು ಅಂಶಗಳು ಚರ್ಚೆಯ ಕೇಂದ್ರಬಿಂದುಗಳಾಗಿದ್ದವು.
ವಿಧೇಯಕವನ್ನು ಪರಿಚಯಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಜಿಬಿಎ ಸದಸ್ಯರ ಪಟ್ಟಿಯಲ್ಲಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳ ಹೆಸರು ತಪ್ಪಿಹೋಗಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು. ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿರುವ ಕಾರಣ ಈ ಬದಲಾವಣೆ ಅಗತ್ಯವಾಯಿತು ಎಂದು ವಿವರಿಸಿದರು.
ಇದೇ ವೇಳೆ, ಮುಖ್ಯಮಂತ್ರಿಯೇ ಜಿಬಿಎ ಮುಖ್ಯಸ್ಥರಾಗಿರುವುದರಿಂದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಜಿಬಿಎ ಸದಸ್ಯರನ್ನಾಗಿ ಸೇರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸದ ಕಾರಣ ಈ ಅಂಶಗಳು ಗಮನಕ್ಕೆ ಬಂದಿಲ್ಲ ಎಂದು ಡಿಕೆಶಿ ತಿಳಿಸಿದರು.
ನಾಮನಿರ್ದೇಶಿತ ಸದಸ್ಯತ್ವದ ಬಗ್ಗೆ ಸ್ಪಷ್ಟನೆ
ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ನಾಮನಿರ್ದೇಶಿತ ಸದಸ್ಯತ್ವದ ಸೂಕ್ತತೆ ಕುರಿತು ಪ್ರಶ್ನೆ ಎತ್ತಿದಾಗ, ಪ್ರತಿಕ್ರಿಯಿಸಿದ ಡಿಕೆಶಿ,
“ಜಿಬಿಎ ಒಂದು ಚುನಾಯಿತ ಸಂಸ್ಥೆಯಲ್ಲ. ಇದು ರಾಜ್ಯಮಟ್ಟದ ಪ್ರಾಧಿಕಾರ. ಆದರೆ ವಿರೋಧ ಪಕ್ಷದ ಸಲಹೆಯಂತೆ ನಾಮನಿರ್ದೇಶಿತ ಸದಸ್ಯತ್ವ ಬೇಡ ಎಂದರೆ ಅದನ್ನು ಕೈಬಿಡಲು ನಾನು ಸಿದ್ಧನಿದ್ದೇನೆ” ಎಂದು ಹೇಳಿದರು.
ಮತದಾನದ ಹಕ್ಕಿನ ಬಗ್ಗೆ ಚರ್ಚೆ
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಜನಪ್ರತಿನಿಧಿಗಳು ವಿವಿಧ ನಗರಸಭೆ ಹಾಗೂ ಪಾಲಿಕೆಗಳಲ್ಲಿ ಮತದಾನ ಮಾಡುವುದರಿಂದ ಗೊಂದಲ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಡಿಕೆಶಿ,
“ಒಬ್ಬ ವ್ಯಕ್ತಿಗೆ ಒಂದೇ ಕಡೆ ಮತದಾನದ ಹಕ್ಕು ಇರಬೇಕು. ಈ ಸಲಹೆಯನ್ನು ನಾನು ಒಪ್ಪುತ್ತೇನೆ. ಆದರೆ ಜಿಬಿಎ ಚುನಾಯಿತ ಸಂಸ್ಥೆಯಲ್ಲ” ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, ಜನಪ್ರತಿನಿಧಿಗಳ ಕಾಯ್ದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ,
“ಮತದಾನವನ್ನು ಟೂರಿಂಗ್ ಟಾಕೀಸ್ ಮಾಡಿಕೊಳ್ಳಲು ಆಗುವುದಿಲ್ಲ” ಎಂದು ತೀಕ್ಷ್ಣವಾಗಿ ಹೇಳಿದರು.
