ದುಬೈ / ಬೆಂಗಳೂರು: ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗಲ್ಫ್ ಫುಡ್ ಫೇರ್ನಲ್ಲಿ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ವತಿಯಿಂದ ತೆರೆಯಲಾಗಿರುವ ನಂದಿನಿ ಪ್ರದರ್ಶನ ಮಳಿಗೆಗೆ ಅಮೂಲ್ ಅಧ್ಯಕ್ಷ ಶ್ರೀ ಅಶೋಕ್ಭಾಯಿ ಚೌಧರಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂದಿನಿ ಉತ್ಪನ್ನಗಳ ಗುಣಮಟ್ಟ, ಪ್ರದರ್ಶನ ಶೈಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬ್ರಾಂಡ್ ಸ್ಥಾಪನೆಗೆ ಕೆಎಂಎಫ್ ಕೈಗೊಂಡಿರುವ ಪ್ರಯತ್ನಗಳನ್ನು ಅಮೂಲ್ ಅಧ್ಯಕ್ಷರು ಶ್ಲಾಘಿಸಿದರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಹಾಲು ಉತ್ಪನ್ನಗಳನ್ನು ಪ್ರಚಾರ ಮಾಡುವಲ್ಲಿ ಕೆಎಂಎಫ್ನ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಿವಸ್ವಾಮಿ, ಮಾರುಕಟ್ಟೆ ನಿರ್ದೇಶಕ ಶ್ರೀ ಸತೀಶ್, ಹಾಗೂ ಅಮೂಲ್ನ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಭೇಟಿ ದೇಶದ ಎರಡು ಪ್ರಮುಖ ಹಾಲು ಸಹಕಾರ ಸಂಘಗಳ ನಡುವಿನ ಸಹಕಾರ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸಿತು.
ಮಧ್ಯಪ್ರಾಚ್ಯ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಂದಿನಿ ಬ್ರಾಂಡ್ ವಿಸ್ತರಣೆ ಗುರಿಯಾಗಿಟ್ಟುಕೊಂಡು ಕೆಎಂಎಫ್ ಕೈಗೊಂಡಿರುವ ಕ್ರಮಗಳ ಭಾಗವಾಗಿಯೇ ಗಲ್ಫ್ ಫುಡ್ ಫೇರ್ನಲ್ಲಿ ಪಾಲ್ಗೊಳ್ಳಲಾಗಿದೆ. ಜಾಗತಿಕ ಆಹಾರ ಮತ್ತು ಪಾನೀಯ ಕ್ಷೇತ್ರದ ಪ್ರಮುಖ ವೇದಿಕೆಯಾದ ಈ ಪ್ರದರ್ಶನದಲ್ಲಿ ನಂದಿನಿಯ ಭಾಗವಹಿಸುವಿಕೆ ಕರ್ನಾಟಕದ ಹಾಲು ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಗುರುತನ್ನು ನೀಡುವ ಮಹತ್ವದ ಹೆಜ್ಜೆಯಾಗಿದೆ.
