ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್ನಿಂದ 524 ಮೀಟರ್ಗೆ ಹೆಚ್ಚಿಸುವ ಪ್ರಸ್ತಾವನೆಯ ವಿರುದ್ಧ ಆಂಧ್ರಪ್ರದೇಶ ಎತ್ತಿರುವ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ತಕ್ಷಣವೇ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು, ಮಾ. 3: ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀ.ದಿಂದ 524 ಮೀ.ಗೆ ಹೆಚ್ಚಿಸುವ ಪ್ರಸ್ತಾವನೆಗೆ ಆಂಧ್ರಪ್ರದೇಶ ಸರ್ಕಾರ ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ ಸರ್ಕಾರ ಗಜೆಟ್ ನೋಟಿಫಿಕೇಶನ್ ನೀಡಬಾರದು ಮತ್ತು ಭೂಸ್ವಾಧೀನ ಮಾಡಬಾರದು ಎಂದು ಕೇಂದ್ರಕ್ಕೆ ಪತ್ರ ಬರೆದಿರುವುದು ಸರಿಯಲ್ಲ ಎಂದರು. “ಈ ಹಿಂದೆ ತೆಗೆದುಕೊಂಡ ತೀರ್ಮಾನದ ಪ್ರಕಾರವೇ ಕೇಂದ್ರ ನಡೆದುಕೊಳ್ಳಬೇಕು. ಯಾವುದೇ ತಡೆ ಆದೇಶ ಸುಪ್ರೀಂಕೋರ್ಟ್ನಿಂದ ಇಲ್ಲ” ಎಂದು ಸ್ಪಷ್ಟಪಡಿಸಿದರು.
₹70 ಸಾವಿರ ಕೋಟಿ ಭೂಸ್ವಾಧೀನ ಯೋಜನೆಗೆ ಪ್ರಶ್ನೆ
ಸೆಪ್ಟೆಂಬರ್ 16, 2025ರ ಸಚಿವ ಸಂಪುಟ ಸಭೆಯಲ್ಲಿ 1.33 ಲಕ್ಷ ಎಕರೆ ಭೂಸ್ವಾಧೀನವನ್ನು ಒಂದೇ ಹಂತದಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದು, ಒಟ್ಟು ₹70 ಸಾವಿರ ಕೋಟಿ ವೆಚ್ಚವನ್ನು ಮೂರು ಹಂತಗಳಲ್ಲಿ ಮೀಸಲಿಡಲು ಯೋಜಿಸಲಾಗಿತ್ತು. ಎಕರೆಗೆ ₹35–40 ಲಕ್ಷ ಪರಿಹಾರ ನಿಗದಿ ಮಾಡಲಾಗಿತ್ತು. ಆದರೆ ಈ ಭೂಸ್ವಾಧೀನ ಕ್ರಮವನ್ನೇ ಆಂಧ್ರಪ್ರದೇಶ ಪ್ರಶ್ನಿಸಿದೆ ಎಂದು ತಿಳಿಸಿದರು.
“ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ”
ಕಳೆದ 12 ವರ್ಷಗಳಿಂದ ನೋಟಿಫಿಕೇಶನ್ಗೆ ಒತ್ತಡ ಹೇರುತ್ತಿದ್ದೇವೆ. 2010ರ ತೀರ್ಮಾನದ ಪ್ರಕಾರ 177 ಟಿಎಂಸಿಯಿಂದ 330 ಟಿಎಂಸಿ ನೀರು ಬಳಕೆಗೆ ಅವಕಾಶ ದೊರೆತಿದೆ. ಆದರೂ ಈಗಿನ ಅಡ್ಡಗಾಲು ಅಚ್ಚರಿಯಾಗಿದೆ ಎಂದು ಶಿವಕುಮಾರ್ ಹೇಳಿದರು.
ತುಂಗಭದ್ರಾ ನದಿಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಇದನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಕುರಿತು ಚರ್ಚೆಗೆ ಆಂಧ್ರಪ್ರದೇಶ ಸಹಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದರಿಂದ ಒತ್ತಡ, ಸರ್ವಪಕ್ಷ ನಿಯೋಗಕ್ಕೆ ಸಿದ್ಧತೆ
ಮಾ.10ರಿಂದ ಆರಂಭವಾಗುವ ಲೋಕಸಭಾ ಅಧಿವೇಶನದಲ್ಲಿ ರಾಜ್ಯದ ಸಂಸದರು ಪ್ರಧಾನಮಂತ್ರಿ ಹಾಗೂ ಜಲಶಕ್ತಿ ಸಚಿವರ ಮೇಲೆ ಒತ್ತಡ ಹೇರಬೇಕು. ಅಗತ್ಯವಿದ್ದರೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಬಜೆಟ್ ಅಧಿವೇಶನದ ಮಧ್ಯೆ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದರು.
₹20 ಸಾವಿರ ಕೋಟಿ ಈಗಾಗಲೇ ವೆಚ್ಚ
ಯೋಜನೆಗೆ ಈಗಾಗಲೇ ₹20 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಹಿಂದಿನ ಹಾಗೂ ಇಂದಿನ ಸರ್ಕಾರದ ಅವಧಿಯಲ್ಲಿ ಅನೇಕ ಕಾಮಗಾರಿಗಳು ಪ್ರಾರಂಭಗೊಂಡಿವೆ. ಈ ಹಂತದಲ್ಲಿ ವಿಳಂಬ ಉಂಟಾದರೆ ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು.
ತಡೆ ಆದೇಶವಿಲ್ಲದಿದ್ದರೂ ವಿರೋಧ
ಕೇಂದ್ರ ಸಮಿತಿ ವರದಿ ಪ್ರಕಾರ 524 ಮೀ.ಗೆ ಎತ್ತರ ಹೆಚ್ಚಿಸಿದರೂ ಪ್ರವಾಹ ಅಪಾಯವಿಲ್ಲ. ಸುಪ್ರೀಂಕೋರ್ಟ್ನಿಂದ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ಅಡ್ಡಿ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
“ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಸಂಬಂಧ ಬೇರೆ. ರಾಜ್ಯದ ಹಿತ ಮುಖ್ಯ” ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕುರಿತು ಪ್ರತಿಕ್ರಿಯಿಸಿದರು.
