ಬೆಂಗಳೂರು: ಆನೇಕಲ್ನ ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ ಅಲಿಯಾಸ್ ಗೋಪಿ ಅಪಹರಣ ಮತ್ತು ಹತ್ಯೆ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಮಂಗಳವಾರ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದು ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪೊಲೀಸರಿಂದ ಬಂದಿರುವ ಪ್ರಾಥಮಿಕ ವರದಿಗಳ ಆಧಾರದ ಮೇಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲು ಸೂಚನೆ ನೀಡಲಾಗಿದೆ. ಮುಂದಿನ ತನಿಖೆಯನ್ನು ಸಿಐಡಿ ನಡೆಸಲಿದೆ ಎಂದು ಗೃಹ ಸಚಿವರು ಹೇಳಿದರು.


ನ್ಯಾಯ ಒದಗಿಸಬೇಕು: ಶಾಸಕ ಪ್ರದೀಪ್ ಈಶ್ವರ್
ಈ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಒತ್ತಾಯಿಸಿದರು. ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರು ಶಂಕಿತರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸಿನಿಮಾ ಸ್ಟೈಲ್ ಅಪಹರಣ
ಪೊಲೀಸರ ಮಾಹಿತಿ ಪ್ರಕಾರ, ಆನೇಕಲ್ನ ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ ಅಲಿಯಾಸ್ ಗೋಪಿ ಅವರನ್ನು ಕಳೆದ ಭಾನುವಾರ ಸಿನಿಮಾ ಶೈಲಿಯಲ್ಲಿ ಅಪಹರಿಸಲಾಗಿದೆ.
ಭಾನುವಾರ ಗೋಪಿ ಹಾಗೂ ಅವರ ಸ್ನೇಹಿತ ಸತೀಶ್ ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆನೇಕಲ್ ತಾಲ್ಲೂಕಿನ ಕರ್ಪುರ ಗೇಟ್ ಬಳಿ ಅಪಹರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣದ ನಂತರ ಅವರನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕನಿಕೊಟ್ಟೈ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣವು ಕರ್ನಾಟಕ–ತಮಿಳುನಾಡು ಗಡಿ ದಾಟಿದ ಅಪರಾಧವಾಗಿರುವುದರಿಂದ, ಅಪಹರಣದ ಉದ್ದೇಶ, ಆರೋಪಿಗಳ ಪಾತ್ರ ಹಾಗೂ ಇತರೆ ವಿವರಗಳನ್ನು ಸಿಐಡಿ ಸಮಗ್ರವಾಗಿ ತನಿಖೆ ನಡೆಸಲಿದೆ.
