ಬೆಂಗಳೂರು, ಜುಲೈ 16 (ಕರ್ನಾಟಕ ವಾರ್ತೆ): ಹುಬ್ಬಳ್ಳಿಯಲ್ಲಿ ಮೇ 15 ರಂದು ಹತ್ಯೆಯಾದ ಅಂಜಲಿ ಮೋಹನ ಅಂಬಿಗೇರ ಅವರ ಕುಟುಂಬಕ್ಕೆ ನ್ಯಾಯ ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬ ಹಾಗೂ ರಾಜ್ಯದಲ್ಲಿ ಕೊಲೆ,ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ಕುರಿತ ನಿಷ್ಪಕ್ಷಪಾತ ತನಿಖೆ ಕೈಗೊಂಡು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶೀಘ್ರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ನಿಯಮ 72 ರಡಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಅಂಜಲಿ ಮೋಹನ ಅಂಬಿಗೇರ ಅವರ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ನಗರ, ಬಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣವನ್ನು ಸಿಐಡಿ ಗೆ ವಹಿಸಲಾಗಿದೆ.
ರಾಜ್ಯದಲ್ಲಿ ವರದಿಯಾಗುವ ಕೊಲೆ/ಹತ್ಯೆ ಪ್ರಕರಣಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ಕೈಗೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ವೈಜ್ಞಾನಿಕವಾಗಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮ ವಹಿಸಲಾಗುತ್ತಿದೆ.
ವಿಚಾರಣಾ ದಿನಾಂಕಗಳಂದು ಸಾಕ್ಷಿದಾರರಿಗೆ ಘನ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ತಿಳುವಳಿಕೆ ನೀಡಲಾಗುತ್ತಿದೆ ಎಂದ ಅವರು ಪ್ರಕರಣಗಳ ತ್ವರಿತ ವಿಚಾರಣೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗುತ್ತಿದೆ ಎಂದರು