ಹುಬ್ಬಳ್ಳಿ : ಕರ್ತವ್ಯ ಲೋಪ ಆರೋಪದ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಒರ್ವ ಸಿಬ್ಬಂದಿಯನ್ನು ಅಮಾನತು ಮಾಡಿ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಳ್ಳಂಬೆಳ್ಳಿಗೆ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಎಂಬಾತ ಮನೆಗೆ ನುಗ್ಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ವಿಶ್ವನಾಥ ಪ್ರೀತಿ ವಿಚಾರಕ್ಕೆ ಯುವತಿಯನ್ನು ಪೀಡಿಸಿ ಒಪ್ಪದಿದ್ದಾಗ ನೇಹಾ ಮಾದರಿಯಲ್ಲಿಯೇ ನಿನ್ನ ಸ್ಥಿತಿಯಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇದರಿಂದ ಭೀತಿಗೊಂಡಿದ್ದ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿಶ್ವನಾಥ ವಿರುದ್ಧ ಪ್ರಕರಣ ದಾಖಲು ಮಾಡಲು ಹೋದಾಗ ಪೊಲೀಸರು, ಇವೆಲ್ಲಾ ಮೂಡನಂಬಿಕೆ ಎಂದು ಹೇಳಿ, ಕಳಿಸಿ ಕರ್ತವ್ಯ ಲೋಪವೆಸಗಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಅಂದು ಪ್ರಕರಣ ದಾಖಲಿಸಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಅಂಜಲಿ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ತನಿಖೆಗೆ ಸೂಚನೆ ನೀಡಿದ್ದರು. ಆದರೆ ಇದೀಗ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಚಂದ್ರಕಾಂತ ಹಾಗೂ ಸಿಬ್ಬಂದಿ ರೇಖಾ ಹಾವರೆಡ್ಡಿ ಎಂಬವರನ್ನು ಅಮಾನತು ಮಾಡಿದ್ದಾರೆ.