ಹುಬ್ಬಳ್ಳಿ, ಮೇ 19: ಇಲ್ಲಿನ ವೀರಾಪುರ ಓಣಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ವಹಿಸಿದ್ದ ಆರೋಪದಲ್ಲಿ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಅಂಜಲಿ ಕೊಲೆ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಆರೋಪದಲ್ಲಿ ಮೇಲೆ ಈ ಹಿಂದೆ ಪೊಲೀಸ್ ಇನ್ ಸ್ಪೆಪೆಕ್ಟರ್ ಹಾಗೂ ಮಹಿಳಾ ಹೆಡ್ ಕಾನ್ ಸ್ಟೇಬಲ್ ಅವರನ್ನು ಅಮಾನತು ಮಾಡಲಾಗಿತ್ತು.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಅಂಜಲಿ ಕುಟುಂಬದವರು ಹೋಗಿ ಮಾಹಿತಿ ನೀಡಿದ ಬಳಿಕವೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು ಇನ್ ಸ್ಪೆಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ರೇಖಾ ಹಾವ ರಡ್ಡಿಯವರನ್ನು ಅಮಾನತು ಮಾಡಿದ್ದರು. ಇನ್ನೂ ಕೆಲ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯ ಆರೋಪ ಮಾಡಲಾಗಿದೆ. ಅವರ ಮೇಲೂ ಕ್ರಮದ ಆತಂಕ ಎದುರಾಗಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಕಳೆದ ಬುಧವಾರ (ಮೇ 15) ಮುಂಜಾನೆ ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ(20) ಮನೆಗೆ ನುಗ್ಗಿದ ಯುವಕ ಚಾಕುವಿನಿಂದ ಚುಚ್ಚಿ ಕೊಲೆಗೈಯಲಾಗಿತ್ತು. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್(21)ನನ್ನು ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ ನೆರವಿನೊಂದಿಗೆ ಬಂಧಿಸಿ ಹುಬ್ಬಳ್ಳಿಗೆ ಕರೆತರಲಾಗಿದೆ.
