ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ (PG Medical) ಕೋರ್ಸ್ಗಳಿಗೆ ನಡೆದ ಸ್ಟ್ರೇ ವ್ಯಾಕೆನ್ಸಿ ಸುತ್ತಿನ ಸೀಟ್ ಹಂಚಿಕೆಯ ನಂತರ ಇನ್ನೂ 783 ಸೀಟುಗಳು ಖಾಲಿ ಉಳಿದಿರುವ ಹಿನ್ನೆಲೆ, ಅವುಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಾರ್ಚ್ 11ರಂದು ಮತ್ತೊಂದು ಕೌನ್ಸೆಲಿಂಗ್ ನಡೆಸಲಿದೆ.
KEA ಆಡಳಿತಾಧಿಕಾರಿ ಇಸ್ಲಾಮುದ್ದೀನ್ ಗದ್ಯಾಲ್ ಅವರು ನೀಡಿದ ಮಾಹಿತಿಯ ಪ್ರಕಾರ, ಹಿಂದಿನ ಯಾವುದೇ ಕೌನ್ಸೆಲಿಂಗ್ ಸುತ್ತಿನಲ್ಲಿ ಸೀಟು ಸಿಗದ ಅಭ್ಯರ್ಥಿಗಳು ಈ ವಿಶೇಷ ಕೌನ್ಸೆಲಿಂಗ್ನಲ್ಲಿ ಭಾಗವಹಿಸಬಹುದು.
ಇದರ ಜೊತೆಗೆ, ಇದುವರೆಗೂ ಅರ್ಜಿ ಸಲ್ಲಿಸದಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಕೂಡ ನಾಳೆ KEA ಕಚೇರಿಗೆ ಬಂದು ಅರ್ಜಿ ಸಲ್ಲಿಸಿ, ಡಿಮಾಂಡ್ ಡ್ರಾಫ್ಟ್ (DD) ನೀಡಿ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಖಾಲಿ ಇರುವ ಸೀಟುಗಳ ವಿವರ, ಕಾಲೇಜುಗಳ ಪಟ್ಟಿ, ಲಭ್ಯವಿರುವ ಕೋರ್ಸ್ಗಳು ಮತ್ತು ಶುಲ್ಕದ ವಿವರಗಳನ್ನು KEA ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ KEA ಕಚೇರಿಗೆ ತಮ್ಮ ಆಯ್ಕೆಯ ಕೋರ್ಸ್ಗೆ ಸಂಬಂಧಿಸಿದ ಪೂರ್ಣ ಶುಲ್ಕದ ಡಿಮಾಂಡ್ ಡ್ರಾಫ್ಟ್ (DD) ಅಥವಾ ಚೆಕ್ ಹಾಗೂ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.
ಡಿಮಾಂಡ್ ಡ್ರಾಫ್ಟ್ ಅಥವಾ ಚೆಕ್ ಅನ್ನು
“Executive Director, Karnataka Examinations Authority, Malleswaram, Bengaluru”
ಎಂಬ ಹೆಸರಿನಲ್ಲಿ ತೆಗೆದುಕೊಂಡು ಬರಬೇಕು.
DD ಮತ್ತು ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಮಧ್ಯಾಹ್ನ 12:30ರಿಂದ ಸಂಜೆ 4:00 ಗಂಟೆಯವರೆಗೆ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗುತ್ತದೆ.
ಸೀಟ್ ಹಂಚಿಕೆ ಫಲಿತಾಂಶವನ್ನು ಅದೇ ದಿನ ಸಂಜೆ 7 ಗಂಟೆಗೆ ಪ್ರಕಟಿಸಲಾಗುತ್ತದೆ. ಸೀಟು ಪಡೆದ ಅಭ್ಯರ್ಥಿಗಳು ಮಾರ್ಚ್ 12ರಂದು ಸಂಜೆ 5:30ರೊಳಗೆ ಸಂಬಂಧಿಸಿದ ಕಾಲೇಜಿಗೆ ಹಾಜರಾಗಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು KEA ತಿಳಿಸಿದೆ.
