ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಮೂವರು ಬೆಂಬಲಿಗರ ವಿರುದ್ಧ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅನ್ವಯ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ 40 ವರ್ಷದ ಮಹಿಳೆ ದೂರು ನೀಡಿದ್ದು, ಮುನಿರತ್ನ, ವಸಂತ, ಚನ್ನಕೇಶ, ಕಮಲ್ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನೆಯು 2023ರಲ್ಲಿ ನಡೆದಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಹೆದರಿ ದೂರು ನೀಡಿರಲಿಲ್ಲ. ಈಗ ದೂರು ನೀಡುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೆ. ಪತಿ ಬಿಟ್ಟು ಹೋಗಿದ್ದರಿಂದ ಮತ್ತೊಬ್ಬರನ್ನು ಮದುವೆ ಆಗಿ ಜೀವನ ನಡೆಸುತ್ತಿದ್ದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊರಿಸಿ ನನ್ನನ್ನು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಅವರ ಬೆಂಬಲಿಗರು ಬಂದು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ಆಮಿಷವೊಡ್ಡಿದ್ದರು. ನಂತರ, ಶಾಸಕರ ಕಚೇರಿಗೆ ಕರೆದೊಯ್ದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಮುನಿರತ್ನ ಅವರು ನನ್ನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಬಳಿಕ, ಬಿಳಿ ಬಣ್ಣದ ಬಾಕ್ಸ್‌ನಲ್ಲಿದ್ದ ದ್ರವ ತೆಗೆದು ನನ್ನ ಎಡಭಾಗದ ಕೈಗೆ ಚುಚ್ಚಿ, ಜೀವನಪರ್ಯಂತ ನರಳುತ್ತೀಯಾ ಎಂದು ಹೇಳಿ ಬೆದರಿಸಿದ್ದರು ಎಂಬುದು ಎಫ್‌ಐಆರ್‌ನಲ್ಲಿದೆ.
2025ರ ಜನವರಿ 14ರಂದು ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದಾಗ ಇಡಿಆರ್ ವೈರಸ್ ಕಾಯಿಲೆ ಇರುವುದಾಗಿ ಪತ್ತೆಯಾಗಿತ್ತು. ಇದು ವಾಸಿಯಾಗದ ಕಾಯಿಲೆ ಎಂದು ವರದಿಯಲ್ಲಿ ವೈದ್ಯರು ತಿಳಿಸಿದ್ದಾರೆಎಂದು ವಿವರಿಸಲಾಗಿದೆ.
ಇತ್ತೀಚೆಗೆ ಇಡಿಆರ್ ವೈರಸ್ ಕಾಯಿಲೆಗೆ ತುತ್ತಾಗಿರುವುದು ಗೊತ್ತಾಗಿದ್ದರಿಂದ ಮಾನಸಿಕವಾಗಿ ನೊಂದು ಸಂತ್ರಸ್ತೆ ಮೇ 19ರಂದು ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಹೇಳಿಕೆ ದಾಖಲಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.