Home ರಾಜಕೀಯ ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ

ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ

12
0
Appeal to Union Forest Minister for release of tiger sanctuary dues
Appeal to Union Forest Minister for release of tiger sanctuary dues

ಭೂಪೀಂದ್ರ ಯಾದವ್ ಭೇಟಿ ಮಾಡಿದ ಈಶ್ವರ ಬಿ ಖಂಡ್ರೆ

ನವದೆಹಲಿ:

ಕೇಂದ್ರ ಪ್ರಾಯೋಜಿತ ಹುಲಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2022-23ನೇ ಸಾಲಿನಲ್ಲಿ ಮಂಜೂರಾದ ಸುಮಾರು 60 ಕೋಟಿ ರೂ. ಪೈಕಿ 30 ಕೋಟಿ ರೂಪಾಯಿ ಬಾಕಿ ಬರಬೇಕಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿಂದು ಕೇಂದ್ರ ಸಚಿವರನ್ನು ಭೇಟಿ ಮಾಡಿದ ಈಶ್ವರ ಖಂಡ್ರೆ, ಹುಲಿ ಯೋಜನೆಯಡಿ ಕಾಳಿ, ಭದ್ರಾ, ನಾಗರಹೊಳೆ, ಬಂಡಿಪುರ ಮತ್ತು ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು 61 ಕೋಟಿ ರೂಪಾಯಿ ಸೇರಿ ಒಟ್ಟಾರೆ ಸುಮಾರು 91.99 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕೋರಿದ್ದು, ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ರಕ್ಷಣೆ ಮತ್ತು ವಿಸ್ತರಣೆಗಾಗಿ ಕಾಂಪಾ ನಿಧಿಯಡಿ 2023-24ರ ಸಾಲಿನಲ್ಲಿ ರಾಜ್ಯದಿಂದ ಸುಮಾರು 362 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 140 ಕೋಟಿ ರೂ.ಗೆ ಮಾತ್ರ ಮಂಜೂರಾತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ 222 ಕೋಟಿ ಬಾಕಿ ನಿಧಿಯ ಮಂಜೂರಾತಿಗೂ ಮನವಿ ಮಾಡಲಾಗಿದ್ದು, ಇದಕ್ಕೆ ಅಗತ್ಯವಾದ ಎಲ್ಲ ನಿಬಂಧನೆಗಳನ್ನೂ ಪೂರೈಸಲಾಗುವುದು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ನಗರ -ವನ ಯೋಜನೆ ಅಡಿ ರಾಜ್ಯದ 9 ನಗರಗಳಿಗಾಗಿ 26 ಕೋಟಿ 70 ಲಕ್ಷ ಯೋಜನೆ ಅನುಮೋದನೆ ನೀಡುವಂತೆಯೂ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದ್ದು, ಭೂಪೇಂದ್ರ ಯಾದವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here