ಬೆಂಗಳೂರು:
ನಿಗಮ ಹಾಗೂ ಮಂಡಳಿಗಳಿಗೆ ನೇಮಕಾತಿಯು ಪಕ್ಷದಲ್ಲಿ ಈ ಕುರಿತ ಚರ್ಚೆಯ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಳಿನ್ ಕುಮಾರ್ ಕಟೀಲ್ ಅವರು ಮುಂದಿನ ವಾರ ಆಗಲಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಪಕ್ಷದ ಮೇಲೆ ಅವಲಂಬಿಸಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದರು. ನಿಗಮ, ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಪಕ್ಷದವರು ಪರಾಮರ್ಶೆ ಮಾಡಿ ವರದಿ ನೀಡುತ್ತಾರೆ. ಅದರ ಆಧಾರಾದ ಮೇಲೆ ಕ್ರಮ ವಹಿಸಲಾಗುವುದು ಎಂದರು.
ಆಯವ್ಯಯಕ್ಕೆ ಸಿದ್ಧತೆ
ಬಜೆಟ್ ಸಿದ್ಧತೆಗಳು ಪ್ರಾರಂಭವಾಗಿದೆ. ಡಿಸೆಂಬರ್ ಮಾಹೆಯಲ್ಲಿ ಹಣಕಾಸು ಹಾಗೂ ಆದಾಯ ಬರುವ ಇಲಾಖೆಗಳೊಂದಿಗೆ ಆಂತರಿಕ ಸಭೆಗಳನ್ನು ನಡೆಸಲಾಗಿದ್ದು, ಗುರಿಗಳನ್ನು ತಲುಪಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ ಅಂತ್ಯದಿಂದ ಕೋವಿಡ್ ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯೊಂದಿಗೆ ಮತ್ತೊಂದು ಸಭೆಯನ್ನು ಇದೇ 25 ರಂದು ಮಾಡಲಿದ್ದೇನೆ. ನಂತರ ಎಲ್ಲಾ ಇಲಾಖೆಗಳ ಪ್ರಸ್ತಾವನೆಗಳು, ಸಂಘ ಸಂಸ್ಥೆಗಳ ಬಗ್ಗೆ ಚರ್ಚೆ ಮಾಡಿ ಬಜೆಟ್ ಸಿದ್ಧಪಡಿಸಲಾಗುವುದು ಎಂದರು.
ರಹಸ್ಯ ಸಭೆ ಬಗ್ಗೆ ನನಗೆ ಗೊತ್ತಿಲ್ಲ
ಬೆಳಗಾವಿಯಲ್ಲಿ ಉಮೇಶ್ ಕತ್ತಿ ಅವರ ಮನೆಯಲ್ಲಿ ರಹಸ್ಯ ಸಭೆ ಜರುಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ಈ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು. ನಾಯಕರು ಬೇರೆ ಬೇರೆ ಸಂದರ್ಭದಲ್ಲಿ ಸೇರಿತ್ತಾರೆ.ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಬಿಜೆಪಿಯವರೂ ಸಭೆ ಸೇರುತ್ತಾರೆ ಅದಕ್ಕೆ ಮಾಧ್ಯಮಗಳು ನೀಡಿರುವ ವ್ಯಾಖ್ಯಾನ ಸರಿಯಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ: ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಸಹಜವಾಗಿ ಆಕಾಂಕ್ಷಿಗಳು ಇರುತ್ತಾರೆ. ತಪ್ಪೇನಿಲ್ಲ. ಯಾವಾಗ, ಯಾವ ರೀತಿ ಮಾಡಬೇಕೆನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದೆ. ನಾನೂ ಕೂಡ ಪಕ್ಷದ ವರಿಷ್ಠರ ಗಮನಕ್ಕೆ ಈ ವಿಷಯವನ್ನು ತಂದಿದ್ದೇನೆ. ವರಿಷ್ಠರು ಕರೆದು ಮಾತನಾಡಿದ ಸಂದರ್ಭದಲ್ಲಿ ಎಲ್ಲ ವಿವರಗಳನ್ನು ನೀಡಲಾಗುವುದು ಎಂದರು.
ಸರ್ಕಾರದ 6 ತಿಂಗಳ ಸಾಧನೆಗಳ ಪುಸ್ತಕ :ಜನವರಿ 28 ಕ್ಕೆ ಸರ್ಕಾರ 6 ತಿಂಗಳು ಪೂರೈಸುತ್ತಿದ್ದು, ಈವರೆಗಿನ ಹಾದಿ ನೆಮ್ಮದಿ ಹಾಗೂ ಯಶಸ್ಸು ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಪತ್ರಿಕಾ ಗೋಷ್ಠಿ ಕರೆದು ಉತ್ತರ ನೀಡಲಾಗುವುದು. ಆರು ತಿಂಗಳ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಕೋವಿಡ್ ಸ್ಥಿತಿಗತಿ: ಕೋವಿಡ್ ಬಗ್ಗೆ ಈಗಾಗಲೇ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ವಾರಾಂತ್ಯದ ಕರ್ಫ್ಯೂ ಹಿಂಪಡೆಯಲಾಗಿದೆ. ನಮ್ಮ ರಾಜ್ಯದಲ್ಲಿ ಕೋವಿಡ್ ಯಾವ ರೀತಿ ಮುಂದುವರಿದಿದೆ, ಸೋಂಕಿತರ ಸ್ಥಿತಿಗತಿ ಏನು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ ಯಾವುದೇ ತೀರ್ಮಾನಕ್ಕೆ ಬರಲಾಗುವುದು.
ನಾಲ್ಕು ದಿನಗಳಿಂದ ಉಡುಪಿ ಕಾಲೇಜಿನಲ್ಲಿ ಆಗುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಶಿಕ್ಷಣ ಸಚಿವರು ಪರಿಶೀಲಿಸಲು ಸೂಚಿಸಲಾಗಿದೆ ಎಂದರು.