ಹಾಸನ:
ಫೆಬ್ರವರಿ 10ರಂದು ಅರಕಲಗೂಡಿನಲ್ಲಿ ಆಯೋಜಿಸಿರುವ ಜೆಡಿಎಸ್ ಕಾರ್ಯಕರ್ತರ ಮೆಗಾ ರ್ಯಾಲಿಯಲ್ಲಿ ಮಾಜಿ ಸಚಿವ ಎ ಮಂಜು ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅರಕಲಗೂಡು ಜೆಡಿಎಸ್ ಟಿಕೆಟ್ ಅನ್ನು ಎ ಮಂಜುಗೆ ಘೋಷಣೆ ಮಾಡಿದ ಮರುದಿನ ಜೆಡಿಎಸ್ ಸಮಾವೇಶ ನಡೆಸಲು ಮಂಜು ನಿರ್ಧರಿಸಿದ್ದಾರೆ.
ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮಾಜಿ ಸಚಿವ ಎ. ಮಂಜು ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಅರಕಲಗೂಡು ಕ್ಷೇತ್ರದ ರಾಜಕೀಯ ಸನ್ನಿವೇಶದ ಕುರಿತು ಚರ್ಚಿಸಿದ್ದೇನೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಪಕ್ಷಕ್ಕೆ ಬರುವಂತೆ ಒತ್ತಾಯಿಸಿದರು. 1994ರಲ್ಲಿ ಹೆಚ್.ಡಿ.ದೇವೇಗೌಡ ಅವರು ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರಿಗೆ ಸಹಾಯ ಮಾಡಿದ್ದೇನೆ ಎಂದು ಎ.ಮಂಜು ಹೇಳಿದರು.
ರಾಜಕೀಯದಲ್ಲಿ ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಮತ್ತು ರಾಜಕೀಯದಲ್ಲಿ ಮಿತ್ರ ಅಥವಾ ಶತ್ರು ಕೂಡ ಇಲ್ಲ. ಜೆಡಿಎಸ್ ನಾಯಕರು ಆಹ್ವಾನ ನೀಡದಿದ್ದರೆ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೆ. ಮಾಜಿ ಸಚಿವ ಎಚ್.ಡಿ.ದೇವೇಗೌಡ ಅವರೊಂದಿಗೆ ನನಗೆ ತಂದೆ ಮತ್ತು ಮಗನ ಸಂಬಂಧವಿದೆ ಎಂದು ಹೇಳಿದರು.
1999ರಲ್ಲಿ ಎ ಮಂಜು ಬಿಜೆಪಿ ಟಿಕೆಟ್‌ನಲ್ಲಿ ಅರಕಲಗೂಡು ಕ್ಷೇತ್ರದಿಂದ ಗೆದ್ದಿದ್ದರು. ನಂತರ ಅವರು 2008ರಲ್ಲಿ ಕಾಂಗ್ರೆಸ್ ಸೇರಿ ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದ ಅವರು ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವರಾಗಿದ್ದರು. ನಂತರ ಬಿಜೆಪಿ ಸೇರಿ 2019ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದರು.