ಬೆಂಗಳೂರು: ಗೃಹ ಬಳಕೆಗೆ ಪಡೆದ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಬಳಸಬಾರದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಬೆಸ್ಕಾಂ ತಿಳಿಸಿರುವಂತೆ, ಗೃಹ ಬಳಕೆಗೆ ನೀಡಲಾಗಿರುವ ಎಲ್ಟಿ–1 (LT-1) ವಿದ್ಯುತ್ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್ಗಳು, ಸರ್ವಿಸ್ ಅಪಾರ್ಟ್ಮೆಂಟ್ಗಳು, ಪೇಯಿಂಗ್ ಗೆಸ್ಟ್ (PG) ವಸತಿಗಳು ಹಾಗೂ ಕಚೇರಿಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ.
ಇಂತಹ ದುರುಪಯೋಗ ವಿದ್ಯುತ್ ನಿಯಮಗಳ ಉಲ್ಲಂಘನೆಯಾಗಿದ್ದು, ಪತ್ತೆಯಾದಲ್ಲಿ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಿ ಸಂಬಂಧಿತ ಗ್ರಾಹಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.
ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಇತರ ಉದ್ದೇಶಗಳಿಗೆ ಬಳಸುತ್ತಿರುವ ಗ್ರಾಹಕರು ತಕ್ಷಣವೇ ತಮ್ಮ ಸಂಬಂಧಿತ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಸರಿಯಾದ ಟಾರಿಫ್ ವರ್ಗ (tariff category) ಗೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿ ಸಂಪರ್ಕವನ್ನು ನಿಯಮಾನುಸಾರ ಪರಿಷ್ಕರಿಸಿಕೊಳ್ಳಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಹಬ್ಬ-ಜಾತ್ರೆ, ಉತ್ಸವ ಅಥವಾ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿಯೂ ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಬಳಸದೇ, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕಾಗಿ ಸಂಬಂಧಿತ ಉಪವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಅನ್ಯ ಉದ್ದೇಶಗಳಿಗೆ ಬಳಸುವವರ ವಿರುದ್ಧ ವಿದ್ಯುತ್ ಅಧಿನಿಯಮ 2003ರ ಕಲಂ 126 ಮತ್ತು 135 ಹಾಗೂ ವಿದ್ಯುತ್ ಸರಬರಾಜು ನಿಯಮಗಳ ಕಲಂ 42 ಮತ್ತು ಅದರ ಉಪಕಲಂಗಳ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಈ ಕ್ರಮದ ಉದ್ದೇಶ ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸರಿಯಾದ ಟಾರಿಫ್ ವ್ಯವಸ್ಥೆ ಜಾರಿಗೆ ತರುವುದು ಹಾಗೂ ವಿದ್ಯುತ್ ದುರುಪಯೋಗವನ್ನು ತಡೆಯುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
