ಬೆಂಗಳೂರು, ಡಿ.21: ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲಗಳಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನಗೆ ಕಾಂಗ್ರೆಸ್ನ ಯಾವ ನಾಯಕರ ಜತೆಗೂ ಭಿನ್ನಾಭಿಪ್ರಾಯ ಇಲ್ಲ. ನಾನು ಮತ್ತು ಮುಖ್ಯಮಂತ್ರಿ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?” ಎಂದು ಪ್ರಶ್ನಿಸಿದರು.
ಸಿಎಂ ಆಪ್ತರ ಭೇಟಿ ವಿಚಾರ
ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ನೀವು ಭೇಟಿಯಾಗಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ,
“ಅವರು ಸಿಎಂ ಆಪ್ತರೇನು? ಅವರು ನನಗೂ ಆಪ್ತರೇ. ಯಾರಿಗೆ ಯಾರೂ ಆಪ್ತರಲ್ಲ ಹೇಳಿ. ನಾನು ಸಿಎಂ ಆಪ್ತನಲ್ಲವೇ?” ಎಂದು ಹೇಳಿದರು.
ಕೆ.ಎನ್. ರಾಜಣ್ಣ ಕುರಿತು ಮಾತನಾಡಿದ ಅವರು,
“ರಾಜಣ್ಣ ಅವರು ಮೊದಲು ಜನತಾದಳದಲ್ಲಿದ್ದರು. ನಾನು ಕಾಂಗ್ರೆಸ್ನವನು. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಇದಕ್ಕೂ ಸಿಎಂ ಅವರಿಗೂ ಯಾವುದೇ ಸಂಬಂಧ ಇಲ್ಲ. ಬೇಕಾದರೆ ರಾಜಣ್ಣ ಅವರನ್ನೇ ಕೇಳಿ” ಎಂದು ತಿಳಿಸಿದರು.
ಗೊಂದಲ ಸೃಷ್ಟಿ ಯಾರು ಮಾಡುತ್ತಿದ್ದಾರೆ?
ರಾಜಕೀಯ ಬೆಂಬಲಕ್ಕಾಗಿ ರಾಜಣ್ಣ ಅವರನ್ನು ಭೇಟಿ ಮಾಡಿದ್ದೀರಿ ಎಂಬ ಆರೋಪಕ್ಕೆ ಡಿಕೆ ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
“ನಾವು ಸಹೋದ್ಯೋಗಿಗಳು. ಅವರು ನಮ್ಮ ಜತೆ ಕೆಲಸ ಮಾಡಿದವರು. ಕಳೆದ 16 ವರ್ಷಗಳಿಂದ, ಅವರು ಕಾಂಗ್ರೆಸ್ಗೆ ಬಂದ ದಿನದಿಂದಲೂ ನನಗೂ ಮುಖ್ಯಮಂತ್ರಿಯವರಿಗೂ ಯಾವುದೇ ಭಿನ್ನಾಭಿಪ್ರಾಯ ಇದೆಯೇ? ಗೊಂದಲವನ್ನು ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಸೃಷ್ಟಿಸುತ್ತಿವೆ” ಎಂದು ಹೇಳಿದರು.
“ಕೆಲವೊಮ್ಮೆ ರಾಜಕೀಯವಾಗಿ ಹೇಳಿಕೆಗಳು ಬರುತ್ತವೆ. ಅಣ್ಣ–ತಮ್ಮಂದಿರೇ ಜಗಳ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ, ಇನ್ನು ನಮ್ಮದು ಯಾವ ಜಗಳ?” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸಂಪೂರ್ಣ ಏಕತೆಯಲ್ಲಿದೆ
“ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ನನ್ನ ಸ್ನೇಹಿತರು, ಸಹೋದ್ಯೋಗಿಗಳು. ನಾನು ಯಾರ ಮೇಲೂ ಜಗಳಕ್ಕೆ ಹೋಗಿಲ್ಲ. ಯಾವ ವಿಚಾರದಲ್ಲೂ ಒಬ್ಬರ ವಿರುದ್ಧ ಇನ್ನೊಬ್ಬರು ಹೇಳಿಕೆ ನೀಡಿಲ್ಲ. ದಾಖಲೆಗಳನ್ನು ತೆಗೆದು ನೋಡಿ. ನಾನು ಯಾವ ಕಾಂಗ್ರೆಸ್ ನಾಯಕನ ವಿರುದ್ಧವಾದರೂ ಹೇಳಿಕೆ ನೀಡಿದ್ದರೆ ತೋರಿಸಿ” ಎಂದು ಸವಾಲು ಹಾಕಿದರು.
ಪಕ್ಷದಲ್ಲಿ ಗೊಂದಲವೇ ಇಲ್ಲ
ಬಿ.ಆರ್. ಸುದರ್ಶನ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊಂದಲ ನಿವಾರಣೆಗಾಗಿ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ,
“ನನ್ನ ಪ್ರಕಾರ ಯಾವುದೇ ಗೊಂದಲವೇ ಇಲ್ಲ. ಗೊಂದಲ ಮಾಧ್ಯಮ ಮತ್ತು ಬಿಜೆಪಿಯ ಸೃಷ್ಟಿ. ಅವರ ಪಕ್ಷದಲ್ಲೇ ಸಾಕಷ್ಟು ಸಮಸ್ಯೆಗಳಿವೆ” ಎಂದು ಡಿಕೆ ಹೇಳಿದರು.
ಪರಮೇಶ್ವರ್ ಅವರ ಹೇಳಿಕೆ ಕುರಿತು, “ನಾನು ಅವರ ವಕ್ತಾರನಲ್ಲ. ಅವರು ಸ್ವತಃ ಉತ್ತರ ಕೊಡುತ್ತಾರೆ” ಎಂದರು.
ಆತ್ಮವಿಶ್ವಾಸದ ಮೂಲ
ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಕಾಣಿಸುತ್ತಿದೆ ಎಂದು ಕೇಳಿದಾಗ,
“ಜನರ ಆಶೀರ್ವಾದವೇ ನನಗೆ ಆತ್ಮವಿಶ್ವಾಸ. ನೀವೇ (ಮಾಧ್ಯಮಗಳು) ಅನವಶ್ಯಕ ಪ್ರಚಾರ ಕೊಡುತ್ತಿದ್ದೀರಿ” ಎಂದು ಪ್ರತಿಕ್ರಿಯಿಸಿದರು.
ಹೈಕಮಾಂಡ್ ಕರೆ ವಿಚಾರಕ್ಕೆ ಉತ್ತರಿಸಿದ ಅವರು,
“ಈಗಷ್ಟೇ ಹೈಕಮಾಂಡ್ ನಾಯಕರ ಜತೆ ಮಾತನಾಡಿದ್ದೇನೆ. ಪರಿಷತ್ ಚುನಾವಣೆಗೆ ನಾಲ್ವರಿಗೆ ಬಿ-ಫಾರಂ ನೀಡುವ ವಿಚಾರವಾಗಿ ಚರ್ಚೆ ನಡೆದಿದೆ” ಎಂದರು.
ಹೈಕಮಾಂಡ್ ಭೇಟಿಯ ದಿನಾಂಕ ಕುರಿತು ಕೇಳಿದಾಗ,
“ಎಲ್ಲಿಗೆ ಹೋದರೂ ರಾಜಕೀಯ ಮಾಡುತ್ತೀರಿ. ರಸ್ತೆಗುಂಡಿ ವಿಚಾರ ಬಿಡಿ. ಎಲ್ಲ ಗುಂಡಿಗಳು ಮುಚ್ಚಲಾಗಿದೆ. ನಮ್ಮ ಜಿಬಿಎ ಆಯುಕ್ತರು ಬೆಳಿಗ್ಗೆ–ಸಂಜೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಅದನ್ನೂ ತೋರಿಸಿ” ಎಂದು ಹೇಳಿದರು.
