Home ರಾಜಕೀಯ ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ

ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ

24
0

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಭವನಕ್ಕೆ ತೆರಳಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರಿಗೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಕೇಜ್ರಿವಾಲ್‌ಗೆ ದೆಹಲಿ ಸಚಿವರು ಸಾಥ್ ನೀಡಿದ್ದಾರೆ. ಇದೇ ವೇಳೆ ಹೊಸ ಸರ್ಕಾರ ರಚನೆಗೆ ಅತಿಶಿ ಹಕ್ಕು ಮಂಡಿಸಿದರು.

ಸೆ. 15 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ 48 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ದೆಹಲಿ ನೂತನ ಸಿಎಂ ಸ್ಥಾನಕ್ಕೆ ಸಚಿವೆ ಅತಿಶಿ ಅವರ ಹೆಸರನ್ನು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಅತಿಶಿ ಅವರು ದೆಹಲಿ ಎಎಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ. ಅರವಿಂದ್ ಕೇಜ್ರಿವಾಲ್ ಅವರ ಉನ್ನತ ಸ್ಥಾನಕ್ಕೆ ರಾಜೀನಾಮೆ ಬಳಿಕ ದೆಹಲಿ ಸಚಿವೆ ಅತಿಶಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ನಡೆದ ಆಮ್ ಆದ್ಮಿ ಪಕ್ಷದ (AAP) ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.

ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಸೆಪ್ಟೆಂಬರ್ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಂದ ರಿಲೀಸ್ ಆದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ನಾನು ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪ್ರತಿ ಮನೆ, ಬೀದಿಗೆ ಹೋಗುತ್ತೇನೆ. ಅಲ್ಲಿಯವರೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವುದಿಲ್ಲ. ನಾನು ಜನರಿಂದ ತೀರ್ಪು ಪಡೆಯುತ್ತೇನೆ ಎಂದು ತಮ್ಮ ಭಾಷಣದಲ್ಲಿ ಕೇಜ್ರಿವಾಲ್ ಗುಡುಗಿದ್ದರು.

LEAVE A REPLY

Please enter your comment!
Please enter your name here