As promised, the implementation process of youth fund will start at the end of December: Dy CM DK Shivakumar
ಬೆಳಗಾವಿ:
“ನಾವು ಕೊಟ್ಟ ಮಾತಿನಂತೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಯುವನಿಧಿ ಯೋಜನೆ ಜಾರಿ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾಧ್ಯಮಗಳು, ಡಿ. 21ರಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಮಂಗಳವಾರ ಉತ್ತರಿಸಿ: “ಈ ಯೋಜನೆ ಜಾರಿಗೆ ತಾಂತ್ರಿಕ ವಿಚಾರವಾಗಿ ಚರ್ಚೆ ಮಾಡಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಕೌಶ್ಯಲ್ಯಾಭಿವೃದ್ಧಿ ಸಚಿವರಿಗೆ ನೀಡಿದ್ದೇವೆ.
ಜನವರಿಯಲ್ಲಿ ಈ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಅಧಿಕೃತ ದಿನಾಂಕವನ್ನು ಸಚಿವರು ಪ್ರಕಟಿಸಲಿದ್ದಾರೆ.”
ಬೆಳಗಾವಿ ಅಧಿವೇಶನ ಒಂದು ವಾರ ಮುಂದುವರಿಸಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, “ನಾವು ಇಲ್ಲಿ ಅಧಿವೇಶನ ಕರೆದಿರುವುದು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರ ಒಂದು ರೂಪಾಯಿ ಬರ ಪರಿಹಾರ ನೀಡಿಲ್ಲ. ನರೇಗಾ ಯೋಜನೆಯಡಿ ಇರುವ 100 ಕೂಲಿ ದಿನಗಳನ್ನು 150ಕ್ಕೆ ಏರಿಸಲು ಕಾನೂನಿನಲ್ಲಿ ಅವಕಾಶ ಇದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಇದನ್ನು ಏರಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡಿಲ್ಲ ” ಎಂದು ವಾಗ್ದಾಳಿ ನಡೆಸಿದರು.
