ಬೆಂಗಳೂರು, ಜನವರಿ 6: ಹೊಸ ವರ್ಷಾಚರಣೆಗೆ ಮುನ್ನ ಮಾದಕ ವಸ್ತು ಪೂರೈಕೆ ಯತ್ನವನ್ನು ವಿಫಲಗೊಳಿಸಿರುವ ಅಶೋಕನಗರ ಠಾಣೆ ಪೊಲೀಸರು, ಎಂಬಿಎ ಪದವೀಧರ ಸೇರಿ ಇಬ್ಬರನ್ನು ಬಂಧಿಸಿ ₹3.5 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಣಸವಾಡಿ ನಿವಾಸಿ ಮೊಹಮದ್ ತಾರಿಖ್ (34) — ಎಂಬಿಎ ಪದವೀಧರ ಹಾಗೂ ಖಾಸಗಿ ಕಂಪನಿಯ ಉದ್ಯೋಗಿ, ಮತ್ತು ಕಾಡುಗೋಡಿ ನಿವಾಸಿ ಶೇಖ್ ಅಹಮದ್ ಅರ್ಬಾಸ್ ಖಾನ್ (29) — ಸೆಕೆಂಡ್ಹ್ಯಾಂಡ್ ಕಾರು ವ್ಯಾಪಾರಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ವಿದೇಶಿ ಪ್ರಜೆಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್ ಖರೀದಿಸಿ, ಹೊಸ ವರ್ಷಾಚರಣೆಯ ವೇಳೆ ಯುವಕರಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಉದ್ದೇಶ ಹೊಂದಿದ್ದರು.
ಹೊಸ ವರ್ಷದ ಪಾರ್ಟಿಗಳ ವೇಳೆ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ದೊರಕಿದ ಹಿನ್ನೆಲೆ, ಅಶೋಕನಗರ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಶೇಷ ಕಾರ್ಯಾಚರಣೆ ನಡೆಸಿದರು. ಡಿಸೆಂಬರ್ 31ರಂದು ಹೊಸೂರು ರಸ್ತೆಯ ಹಿಂದೂ ಸ್ಮಶಾನದ ಬಳಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಿಚಾರಣೆಯಲ್ಲಿ ಆತ, ತನ್ನ ಸಹಚರನೊಂದಿಗೆ ಸೇರಿ ಅಪರಿಚಿತ ವ್ಯಕ್ತಿಯಿಂದ ಎಂಡಿಎಂಎ ಖರೀದಿಸಿದ್ದು, ಹೊಸ ವರ್ಷದ ಸಂಭ್ರಮದ ವೇಳೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದೀರ್ಘ ವಿಚಾರಣೆಯ ಬಳಿಕ, ಸ್ಮಶಾನದ ಸಮಾಧಿಯೊಂದರ ಪಕ್ಕದಲ್ಲಿ ಮರೆಮಾಡಿಟ್ಟಿದ್ದ 2 ಕೆ.ಜಿ. 480 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆತನ ನೀಡಿದ ಮಾಹಿತಿಯ ಆಧಾರದಲ್ಲಿ, ಪೊಲೀಸರು ಬೈಯಪ್ಪನಹಳ್ಳಿ ಮಲ್ಲೇಶ್ಪಾಳ್ಯದಲ್ಲಿ ಸಹಚರನನ್ನು ಬಂಧಿಸಿ, ಕಾಡುಗೋಡಿ ಸೀಗೇಹಳ್ಳಿಯಲ್ಲಿರುವ ಅವನ ನಿವಾಸದಿಂದ 720 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ, ಬಂಧಿತರಿಂದ 3 ಕೆ.ಜಿ. 200 ಗ್ರಾಂ ಎಂಡಿಎಂಎ ಕ್ರಿಸ್ಟಲ್ (₹3.5 ಕೋಟಿ ಮೌಲ್ಯ), ಒಂದು ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
