ಸೂರತ್: ಎಟಿಎಂಗಳಲ್ಲಿ ತಾಂತ್ರಿಕ ದೋಷ ಸಾಮಾನ್ಯ.. ಗ್ರಾಹಕರೂ ಕೂಡ ಬ್ಯಾಂಕ್ ಗಳ ವಿರುದ್ಧ ಹಿಡಿ ಶಾಪ ಹಾಕಿ ದೂರು ನೀಡಿದ ಸಾಕಷ್ಟು ಉದಾಹರಣೆಗಳಿವೆ. ಅಂತೆಯೇ ಇಲ್ಲೋರ್ವ ಗ್ರಾಹಕ ತಾನು ಕಳೆದುಕೊಂಡ 10 ಸಾವಿರ ರೂಗೆ ಬದಲಾಗಿ ಬರೊಬ್ಬರಿ 3 ಲಕ್ಷ ರೂ ಪಡೆದಿದ್ದಾನೆ.
ಅಚ್ಚರಿಯಾದರೂ ನಿಜ.. ಫೆಬ್ರವರಿ 18, 2017 ರಂದು ಗುಜರಾತ್ ನ ಸೂರತ್ ಜಿಲ್ಲೆಯ ವ್ಯಕ್ತಿ ಬ್ಯಾಂಕ್ ಆಫ್ ಬರೋಡಾ ಎಟಿಎಂನಲ್ಲಿ 10 ಸಾವಿರ ರೂ ಹಣ ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದರು. ಎಟಿಎಂ ಯಂತ್ರಕ್ಕೆ ತಮ್ಮ ಡೆಬಿಟ್ ಕಾರ್ಡ್ ಹಾಕಿ ಪಿನ್ ಒತ್ತಿ ಹಣವನ್ನೂ ನಮೂದಿಸಿದ್ದರು.
ಆದರೆ ತಾಂತ್ರಿಕ ದೋಷದಿಂದ ಅಂದು ಹಣ ಪಡೆಯಲಾಗಲಿಲ್ಲ. ಬಳಿಕ ಅವರು ಮನೆಗೆ ವಾಪಸ್ ಆದಾಗ ಅವರ ಮೊಬೈಲ್ ಗೆ ಬ್ಯಾಂಕ್ ಸಂದೇಶ ಬಂದಿದ್ದು, ಖಾತೆಯಿಂದ 10 ಸಾವಿರ ರೂ ವಿತ್ ಡ್ರಾ ಆಗಿರುವ ಕುರಿತು ಸಂದೇಶ ಬಂದಿದೆ.
ಇದರಿಂದ ಆಘಾತಕ್ಕೊಳಗಾದ ವ್ಯಕ್ತಿ ಕೂಡಲೇ ಬ್ಯಾಂಕ್ ನವರನ್ನು ಸಂಪರ್ಕಿಸಿ ತಮಗಾದ ಅನಾನುಕೂಲತೆಯನ್ನು ವಿವರಿಸಿದ್ದಾರೆ. ಅಂದು ಮೌಖಿಕವಾಗಿ ಮಾತ್ರ ವ್ಯಕ್ತಿ ದೂರು ನೀಡಿದ್ದರು. ಆದರೆ ಅಂದು ಅವರಿಗೆ ಬ್ಯಾಂಕಿನವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ತಮ್ಮ ಹಣ ಹಿಂದಕ್ಕೆ ಪಡೆಯಲು ಆ ವ್ಯಕ್ತಿ ದೊಡ್ಡಸರ್ಕಸ್ ಅನ್ನೇ ಮಾಡಿದ್ದಾರೆ.
ಲೆಕ್ಕವಿಲ್ಲದಷ್ಟು ಇಮೇಲ್, ಸಂದೇಶ, ದೂರು
ತಮ್ಮದಲ್ಲದ ತಪ್ಪಿಗೆ ಹಣ ಕಳೆದುಕೊಂಡ ವ್ಯಕ್ತಿ ತಮ್ಮ ಹಣ ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರು ಮಾರ್ಚ್ ನಿಂದ ಮೇ ವರೆಗೆ ಇಮೇಲ್ ಗಳ ಮೂಲಕ ಬ್ಯಾಂಕಿನ ಗ್ರಾಹಕ ಬೆಂಬಲ ತಂಡದೊಂದಿಗೆ ಸಂಪರ್ಕದಲ್ಲಿದ್ದರು. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ನಂತರ ಅವರು ಆರ್ಬಿಐ ಮತ್ತು ಇತರ ಕಂಪನಿಗಳನ್ನು ಸಂಪರ್ಕಿಸಿದರು. ಕೊನೆಗೆ ವ್ಯಕ್ತಿ ಗ್ರಾಹಕರ ವೇದಿಕೆಯಲ್ಲೂ ದೂರು ಸಲ್ಲಿಸಿದ್ದಾರೆ.
ಎಟಿಎಂ ನಮ್ಮದಲ್ಲ.. ಬ್ಯಾಂಕ್ ಸಬೂಬು
ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ಸಲ್ಲಿಕೆಯಾದ ದೂರಿನ ವಿಚಾರಣೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಅಧಿಕಾರಿಗಳು ಎಟಿಎಂ ಎಸ್ಬಿಐಗೆ ಸೇರಿದೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಆರೋಪ ತಳ್ಳಿಹಾಕಿದರು. ಆದರೆ, ಗ್ರಾಹಕ ವೇದಿಕೆ ಬ್ಯಾಂಕಿನ ಆರೋಪಗಳನ್ನು ತಳ್ಳಿಹಾಕಿದೆ.
ವಹಿವಾಟು ಯಶಸ್ವಿಯಾಗಿದೆ ಎಂಬುದಕ್ಕೆ ನಿಖರವಾದ ಪುರಾವೆಗಳನ್ನು ತೋರಿಸಲು ಅವರನ್ನು ಕೇಳಲಾಯಿತು. ಅಲ್ಲದೆ ಗ್ರಾಹಕನಿಗೆ ಐದು ದಿನಗಳಲ್ಲಿ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿತ್ತು. ಆದರೆ, ಬ್ಯಾಂಕ್ ಐದು ದಿನಗಳ ಕಾಲ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸಲಿಲ್ಲ.
ವಿಳಂಬ ಮಾಡಿದ ಬ್ಯಾಂಕ್ ಗೆ ದುಬಾರಿ ದಂಡ
ಇನ್ನು ಗ್ರಾಹಕ ವೇದಿಕೆ ಅಂತಿಮ ತೀರ್ಪು ನೀಡಿದ್ದು, 10 ಸಾವಿರ ರೂಪಾಯಿಗಳಿಗೆ ವಾರ್ಷಿಕ ಶೇಕಡಾ 9ರ ಬಡ್ಡಿ ಮತ್ತು ವಿಳಂಬಕ್ಕೆ ದಿನಕ್ಕೆ 100 ರೂಪಾಯಿಗಳ ದಂಡ ಸಹಿತ ಮೊತ್ತ ನೀಡುವಂತೆ ಬ್ಯಾಂಕ್ ಗೆ ಸೂಚಿಸಲಾಗಿದೆ.
ಅದರಂತೆ ಈ ಪ್ರಕರಣದ ದೂರು ದಾಖಲಾಗಿ 3,288 ದಿನಗಳಾಗಿದ್ದು, ಬ್ಯಾಂಕ್ ಸಂತ್ರಸ್ಥ ಗ್ರಾಹಕನಿಗೆ ಇದೀಗ ಬ್ಯಾಂಕ್ 3,28,800 ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಅಲ್ಲದೆ ಪ್ರಕರಣ ಸಂಬಂಧ ಮಾನಸಿಕ ಕಿರುಕುಳಕ್ಕೆ 2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ.
