ನೆಲಮಂಗಲ (ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ಒಂದರ ಮೇಲೊಂದು ಚಿನ್ನದಂಗಡಿ ದರೋಡೆ ಪ್ರಕರಣಗಳು ಆತಂಕ ಮೂಡಿಸುತ್ತಿರುವ ನಡುವೆಯೇ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ದಾಸನಪುರದಲ್ಲಿ ಹಾಡಹಗಲೇ ಗನ್ ತೋರಿಸಿ ಜ್ವೆಲರಿ ಶಾಪ್ ದರೋಡೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ದಾಸನಪುರದಲ್ಲಿರುವ ‘ರಾಮದೇವ್ ಜ್ವೆಲರಿ ಶಾಪ್’ಗೆ ಮಂಗಳವಾರ ಸಂಜೆ ಮೂರು ಮಂದಿ ದರೋಡೆಕೋರರು ಬೈಕ್ನಲ್ಲಿ ಆಗಮಿಸಿ ಗನ್ ಹಿಡಿದು ನುಗ್ಗಿದ್ದಾರೆ. ಒಬ್ಬಾತ ಗನ್ ತೋರಿಸಿ ಅಂಗಡಿ ಮಾಲಿಕನಿಗೆ ಬೆದರಿಕೆ ಹಾಕಿದ್ದರೆ, ಮತ್ತೊಬ್ಬಾತ ಮಾಲಿಕನ ಕುತ್ತಿಗೆ ಹಿಡಿದು ಭೀತಿಯ ವಾತಾವರಣ ನಿರ್ಮಿಸಿದ್ದಾನೆ. ಹೊರಗೆ ನಿಂತಿದ್ದ ಮತ್ತೊಬ್ಬ ದರೋಡೆಕೋರ ಒಳಗೆ ನುಗ್ಗಿ ಶೋಕೇಸ್ನಲ್ಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ಅಂಗಡಿಯಲ್ಲಿ ಇದ್ದ ವಿಷ್ಣು ಮತ್ತು ಗೌತಮ್ ಎಂಬ ಇಬ್ಬರು ಯುವಕರು ಅಪಾರ ಧೈರ್ಯ ತೋರಿ ದರೋಡೆಕೋರರಿಗೆ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಚೀರಾಟ–ಕೂಗಾಟ ಹೆಚ್ಚಾಗುತ್ತಿದ್ದಂತೆ ಗಾಬರಿಗೊಂಡ ಕಳ್ಳರು ಕೈಗೆ ಸಿಕ್ಕಷ್ಟು ಚಿನ್ನಾಭರಣ ದೋಚಿಕೊಂಡು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಕ್ಕದ ಅಂಗಡಿ ಮಾಲಕಿಯ ದಿಟ್ಟತನ
ಇದೇ ವೇಳೆ ಪಕ್ಕದ ಜ್ವೆಲರಿ ಶಾಪ್ನ ಮಹಿಳಾ ಮಾಲಕಿ ಕೂಡ ಕಡ್ಡಿಯಿಂದ ಕಳ್ಳರನ್ನು ಹೆದರಿಸಿದ್ದು, ಈ ಗೊಂದಲದ ನಡುವೆ ದರೋಡೆಕೋರನ ಕೈಯಲ್ಲಿದ್ದ ಮೊಬೈಲ್ ನೆಲಕ್ಕೆ ಬಿದ್ದಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗನ್ ನಿಜವೇ? ಆಟಿಕೆಯೇ?
ದರೋಡೆಕೋರರು ಬಳಸಿದ ಗನ್ ನಿಜವಾದದ್ದೋ ಅಥವಾ ಆಟಿಕೆಯದ್ದೋ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಒಂದೇ ದಿನದ ಹಿಂದಷ್ಟೇ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಗನ್ ತೋರಿಸಿ ಜ್ವೆಲರಿ ಶಾಪ್ ದರೋಡೆ ನಡೆದಿತ್ತು. ಅದರ ಬೆನ್ನಲ್ಲೇ ನೆಲಮಂಗಲದಲ್ಲಿ ನಡೆದ ಈ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನಾರ್ಹವಾಗಿದೆಯೇ? ಪೊಲೀಸರ ಭಯ ಕಳ್ಳರಿಗೆ ಇಲ್ಲವೇ? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಮೂಡಿಸಿದೆ.
ಪೊಲೀಸರು ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
