ಹಾಲಿವುಡ್ನ ದೈತ್ಯ ಸಿನಿಮಾ ‘ಅವತಾರ್: ದಿ ವೇ ಆಫ್ ವಾಟರ್’ (Avatar The way of Water) ವಿಶ್ವಾದ್ಯಂತ ಬಿಡುಗಡೆ ಆಗಿದೆ. ಡಿಸೆಂಬರ್ 16ರಂದು ರಿಲೀಸ್ ಆಗಿರುವ ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರ ಕಾರ್ಯವೈಖರಿಗೆ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ‘ಅವತಾರ್ 2’ (Avatar 2) ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತಿದೆ ಎಂಬುದನ್ನು ತಿಳಿಯುವ ಕುತೂಹಲ ಸಿನಿಪ್ರಿಯರಿಗೆ ಇದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ‘ಅವತಾರ್ 2’ ಚಿತ್ರ ಬಂಗಾರದ ಬೆಳೆ ತೆಗೆಯುತ್ತಿದೆ. ಕೇವಲ 2 ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ದಿನ ಕೂಡ ಭರ್ಜರಿ ಕಮಾಯಿ ಆಗುತ್ತಿದೆ.
ಭಾರತದಲ್ಲಿ ‘ಅವತಾರ್ 2’ ಚಿತ್ರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿಗೂ ಡಬ್ ಆಗಿ ತೆರೆ ಕಂಡಿದೆ. 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಕಟ್ಟಿಕೊಟ್ಟಿರುವ ದೃಶ್ಯಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ (ಡಿ.16) ಭಾರತದಲ್ಲಿ ಈ ಸಿನಿಮಾ 40 ಕೋಟಿ ರೂಪಾಯಿ ಗಳಿಸಿತು. ಎರಡನೇ ಕೂಡ ಅಂದಾಜು ಅಷ್ಟೇ ಪ್ರಮಾಣದಲ್ಲಿ ಕಲೆಕ್ಷನ್ ಆಗಿದೆ. ಮೂರನೇ ದಿನವಾದ ಭಾನುವಾರ (ಡಿ.18) ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬಂದು ‘ಅವತಾರ್ 2’ ನೋಡಿದ್ದಾರೆ. ಮೂರು ದಿನಕ್ಕೆ ಅನಾಯಾಸವಾಗಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: Avatar 2: ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಅದ್ದೂರಿ ರಿಲೀಸ್; ಆದರೆ ಮೊದಲ ದಿನವೇ ಪೈರಸಿ ಕಾಟ
ವಿಶ್ವಾದ್ಯಂತ ಈ ಸಿನಿಮಾ ಸದ್ದು ಮಾಡುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಎರಡೇ ದಿನದಲ್ಲಿ 1500 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. 2009ರಲ್ಲಿ ‘ಅವತಾರ್’ ಚಿತ್ರ ತೆರೆಕಂಡಿತ್ತು. ಅದರ ಮುಂದುವರಿದ ಭಾಗವಾಗಿ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಈಗ ತೆರೆಕಂಡಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಂತಿಮವಾಗಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.