ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸಾರಿಗೆ ನಿಯಮಗಳ ಅರಿವು ಅತ್ಯಗತ್ಯವಾಗಿದ್ದು, ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಸ್ತೆ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಸಾರಿಗೆ ಇಲಾಖೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಫೆಬ್ರವರಿ 1, 2026 ರಂದು ಬೆಂಗಳೂರಿನಲ್ಲಿ ಬೃಹತ್ ‘5K ಸೇಫ್-ಎ-ಥಾನ್ (Safe-A-Thon)’ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಶಾಂತಿ ನಗರದಲ್ಲಿರುವ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,
“ನಮ್ಮ ರಸ್ತೆ – ನಮ್ಮ ಸುರಕ್ಷತೆ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಅಭಿಯಾನವು ಸಾರ್ವಜನಿಕರ ಜೀವ ರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ, ಅಜಾಗರೂಕ ಚಾಲನೆ, ಇವೇ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಸಚಿವರು ಹೇಳಿದರು.
ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಕಾನೂನು ಜಾರಿಗೆ ಜೊತೆಗೆ ಜನಜಾಗೃತಿಯೂ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ರಸ್ತೆ ಸುರಕ್ಷತೆ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಒತ್ತಿ ಹೇಳಿದರು.
ಸಾರ್ವಜನಿಕರು, ಯುವಜನರು ಮತ್ತು ವಿದ್ಯಾರ್ಥಿಗಳು ವಾಕಿಂಗ್, ಸೈಕ್ಲಿಂಗ್ ಅಥವಾ ಓಟದ ಮೂಲಕ ಈ ಅಭಿಯಾನದಲ್ಲಿ ಭಾಗವಹಿಸಿ, ಸುರಕ್ಷಿತ ಸಂಚಾರ ಪಾಲನೆಗೆ ಪ್ರತಿಜ್ಞೆ ಮಾಡಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು.
ಕಾರ್ಯಕ್ರಮದ ವಿವರಗಳು
- ದಿನಾಂಕ: ಫೆಬ್ರವರಿ 1, 2026 (ಭಾನುವಾರ)
- ಸಮಯ: ಬೆಳಿಗ್ಗೆ 6.00 ರಿಂದ 8.00 ಗಂಟೆ
- ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು
- ಪ್ರವೇಶ ಶುಲ್ಕ: ಉಚಿತ (ಎಲ್ಲರಿಗೂ ಮುಕ್ತ)
- ಸಾರ್ವಜನಿಕರು ಮತ್ತು ಯುವಜನರು www.saferoadskarnataka.com ಜಾಲತಾಣದ ಮೂಲಕ
- ಅಥವಾ ಪ್ರಕಟಣೆಯಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
