ಬೆಂಗಳೂರು: ಉದ್ಯೋಗ ಆಧಾರಿತ ಎಇಡಿಪಿ( ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್)ಯನ್ನು ವಿಜ್ಞಾನ ಮತ್ತು ಕಲಾವಿಭಾಗಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಬಿಕಾಂ ಪದವಿಯಲ್ಲಿ ಹಣಕಾಸು, ಬ್ಯಾಂಕಿಂಗ್, ಲಾಜಿಸ್ಟಿಕ್, ಇ-ಕಾಮರ್ಸ್ ,ರಿಟೇಲ್ ಸೆಕ್ಟರ್ ಕೋರ್ಸುಗಳನ್ನು ಎರಡು ವರ್ಷ ಅಧ್ಯಯನ ಮಾಡಿ ಈಗ ಸಂಬಂಧಪಟ್ಟ ಸೂಕ್ತ ಕೈಗಾರಿಕಾ ವಲಯದಲ್ಲಿ ಅಪ್ರೆಂಟಿಸ್ ಶಿಪ್ ಮಾಡಲು ಹೊರಟಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಸಚಿವ ಎಂ.ಸಿ ಸುಧಾಕರ್ ಮಾತನಾಡಿದರು.
2024-25ರಲ್ಲಿ ಆರಂಭಗೊಂಡ ಎಇಡಿಪಿ ಪದವಿ ಕೋರ್ಸ್ಗಳು ವಿದ್ಯಾರ್ಥಿಗಳನ್ನು ಉದ್ಯೋಗಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಉಳಿದ 4 ಮತ್ತೆ 5ನೇ ಸೆಮಿಸ್ಟರ್ ಅನ್ನು ಕೈಗಾರಿಕಾ ವಲಯದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಉದ್ಯೋಗ ಶೀಲರಾಗಲಿದ್ದಾರೆ. ಈ ಹಂತ ಅವರಿಗೆ ಅವರ ಬದುಕಿನ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ವಿದ್ಯಾರ್ಥಿಗಳು ಈ ಹಂತವನ್ನು ಅತ್ಯಂತ ಆತ್ಮವಿಶ್ವಾಸದಿಂದ ನಿಭಾಯಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಎಇಡಿಪಿ ಅನುಷ್ಠಾನಗೊಳಿಸಿದ ನಂತರ ಯುಜಿಸಿ ದೇಶದಾದ್ಯಂತ ಅನುಷ್ಠಾನಗೊಳಿಸಿದೆ. ಇದಕ್ಕೆ ಬಹು ಮುಖ್ಯ ಕಾರಣ ಯುಜಿಸಿ ಮುಖ್ಯಸ್ಥರಾಗಿದ್ದ ಜಗದೀಶ್. ಅವರ ಮುಂದೆ ಈ ಶಿಕ್ಷಣ ವ್ಯವಸ್ಥೆ ಬಗ್ಗೆ ಇದೇ ವೇದಿಕೆಯಲ್ಲಿ ನಾನು ಪ್ರಸ್ತಾಪಿಸಿದ್ದೇ ಪ್ರೇರಣೆಯಾಯಿತು ಎಂದು ತಿಳಿಸಿದರು.
ಎಇಡಿಪಿ ಜಾಗತಿಕ ವ್ಯವಸ್ಥೆಯಲ್ಲಿ ಉದ್ದಿಮೆಗಳ ಅವಶ್ಯಕತೆಗೆ ಸೂಕ್ತವಾದ ಶಿಕ್ಷಣ ನೀಡುವ ಕೋರ್ಸ್ ಆಗಿದೆ. ಹಾಗಾಗಿಯೇ ಮುಂದಿನ ದಿನಗಳಲ್ಲಿ ಬಿಎಸ್ಸಿ, ಬಿಎ ವಿದ್ಯಾರ್ಥಿಗಳಿಗೂ ಹೋಲುವಂತಹ ಪಠ್ಯಕ್ರಮಗಳೊಂದಿಗೆ ಉದ್ದಿಮೆಗಳಿಗೆ ಅವಶ್ಯಕತೆಯನ್ನು ಕಲ್ಪಿಸಲಾಗುವುದು. ಜೊತೆಗೆ ಇನ್ನೂ 63 ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದರು.
