ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಹುಕಾಲದ ಬಳಿಕ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಡಿಜೆ ಹಳ್ಳಿ ರೌಡಿ ಶೀಟರ್ ಪವನ್ ಕುಮಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಂಜಿತ್ ಬಂಧನ ವೇಳೆ ಪೊಲೀಸರ ಮೇಲೆ ಲಾಂಗ್ನಿಂದ ದಾಳಿ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಅಮರಜ್ಯೋತಿ ನಗರದಲ್ಲಿ ಪವನ್ ಕುಮಾರ್ ಅವರನ್ನು ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ್ದ ಗ್ಯಾಂಗ್ ನಿರ್ದಯವಾಗಿ ಕೊಚ್ಚಿ ಕೊಲೆ ಮಾಡಿತ್ತು. ಮನೆಯ ಮುಂದೆ, ತಾಯಿಯ ಕಣ್ಣೆದುರೇ ನಡೆದ ಈ ಹತ್ಯೆ ನಗರದಲ್ಲಿ ಆತಂಕ ಸೃಷ್ಟಿಸಿತ್ತು. ಪವನ್ ಮೂರು ತಿಂಗಳ ಹಿಂದೆ ಬೇಲ್ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ.
ವಿಶೇಷ ಮಾಹಿತಿಯ ಆಧಾರದ ಮೇಲೆ ಸಂಪಿಗೆಹಳ್ಳಿ ಇನ್ಸ್ಪೆಕ್ಟರ್ ವೆಂಕಟೇಶ್ ನೇತೃತ್ವದ ತಂಡ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ರಂಜಿತ್ ಇರುವ ಸ್ಥಳವನ್ನು ಗುರುತಿಸಿತು. ಬಂಧಿಸಲು ಮುಂದಾದಾಗ ಆರೋಪಿ ಲಾಂಗ್ ಹಿಡಿದು ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಒಬ್ಬ ಪೊಲೀಸರಿಗೆ ಸಣ್ಣ ಗಾಯಗಳಾಗಿವೆ ಎನ್ನಲಾಗಿದೆ.
ಮೊದಲು ಪೊಲೀಸರು ಏರ್ ಫೈರಿಂಗ್ ಮಾಡಿ ಶರಣಾಗುವಂತೆ ಸೂಚನೆ ನೀಡಿದರೂ, ಆರೋಪಿ ಮತ್ತೆ ದಾಳಿ ಮಾಡಲು ಮುಂದಾದ ಹಿನ್ನೆಲೆ ಆತ್ಮರಕ್ಷಣೆಗೆ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪೂರ್ವ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅಪರೂಪವಾಗಿದ್ದ ಗುಂಡಿನ ಸದ್ದು ಮತ್ತೆ ಕೇಳಿಬಂದಿರುವುದು ಅಪರಾಧ ಚಟುವಟಿಕೆಗಳ ವಿರುದ್ಧ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳುತ್ತಿರುವ ಸೂಚನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
