ಬೆಂಗಳೂರು, ಡಿ.09: ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ (BAF) ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದಂತೆ, ಕರ್ನಾಟಕ ಸರ್ಕಾರ ಡಿಸೆಂಬರ್ 13ರಂದು ವಿಧಾನಸೌಧದ ಬಾಂಕ್ವೇಟ್ ಹಾಲ್ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಮುಖ ಸಂವಾದವನ್ನು ಆಯೋಜಿಸಿದೆ.
ಈ ಸಭೆಯಲ್ಲಿ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ, 2025 ಕುರಿತ ಚರ್ಚೆ ಹಾಗೂ ಅಪಾರ್ಟ್ಮೆಂಟ್ ಮಾಲೀಕರ ಬಹುದಿನಗಳ ಬೇಡಿಕೆಗಳ ಕುರಿತು ಅಧಿಕೃತ ಮಟ್ಟದಲ್ಲಿ ಸ್ಪಷ್ಟತೆ ದೊರಕುವ ನಿರೀಕ್ಷೆಯಿದೆ.
ನಗರಾಭಿವೃದ್ಧಿ ಇಲಾಖೆಯಿಂದ ಹೊರಬಂದ ಅಧಿಕೃತ ಪತ್ರದ ಪ್ರಕಾರ, ಡಿ.13ರಂದು ಬೆಳಿಗ್ಗೆ 10.00 ರಿಂದ 12.00 ಗಂಟೆಯವರೆಗೆ ನಡೆಯುವ ಈ ಸಂವಾದಕ್ಕೆ, ಬಿಎಎಫ್ ಅಧ್ಯಕ್ಷರು, ಕಾರ್ಯಕಾರಿ ಸದಸ್ಯರು ಹಾಗೂ ಬೆಂಗಳೂರು ನಗರದಲ್ಲಿರುವ ವಿವಿಧ ಅಪಾರ್ಟ್ಮೆಂಟ್ಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ಇದೇ ತಿಂಗಳ 2ರಂದು ಬಿಎಎಫ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಹೊಸ ಅಪಾರ್ಟ್ಮೆಂಟ್ ಬಿಲ್ ಅನ್ನು ವಿಧಾನಸೌಧದಲ್ಲಿ ಮಂಡಿಸುವಂತೆ ಆಗ್ರಹಿಸಿದ್ದರು. ನಂತರ ಅವರು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತుషಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸರ್ಕಾರ ತ್ವರಿತವಾಗಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ನಿವಾಸಿಗಳಲ್ಲಿ ಆಶಾಭಾವನೆ ಮೂಡಿಸಿದೆ.
Also Read: Bengaluru’s 1.5 Million Apartment Residents Demand KAOMA; BAF Pressures Govt Ahead of Belagavi Session
ಬಿಎಎಫ್ ಅಧ್ಯಕ್ಷ ಸತೀಶ್ ಮಲ್ಯ
“ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಂವಾದಕ್ಕೆ ದಿನಾಂಕ ಘೋಷಿಸಿರುವುದು ತುಂಬಾ ಮುಖ್ಯ ಹೆಜ್ಜೆ. ಅಪಾರ್ಟ್ಮೆಂಟ್ ಮಾಲೀಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. 2025ರ ಹೊಸ ವಿಧೇಯಕದ ಅನುಷ್ಠಾನದ ಕುರಿತೂ ಸ್ಪಷ್ಟತೆ ಬರಲಿದೆ, ” ಹೇಳಿದ್ದಾರೆ.
ಬಿಎಎಫ್ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್
“ಡಿ.13ರ ಸಂವಾದದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್ಮೆಂಟ್ ಮಾಲೀಕರು ಭಾಗವಹಿಸಬೇಕು. ಇದು ನಮ್ಮ ಸಮೂಹಬಲವನ್ನು ಸರ್ಕಾರಕ್ಕೆ ತೋರಿಸುವ ಸಮಯ. ಸಮಸ್ಯೆಗಳನ್ನೂ, ಬೇಡಿಕೆಗಳನ್ನೂ ನೇರವಾಗಿ ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ, ” ನೀಡಿದ್ದಾರೆ.
