ಬೆಂಗಳೂರು, ಸೆಪ್ಟೆಂಬರ್ 13: ನಗರದಲ್ಲಿ ಎರಡು ವಿಚಿತ್ರ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದ ಬಳಿ ಕಾರು ಬೆಂಕಿ ಹೊತ್ತಿ ಉರಿದರೆ, ಇನ್ನೊಂದು ಕಡೆ ಡಿಸಿಎಂ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಫಾರ್ಚುನರ್ ಲಕ್ಸುರಿ ಕಾರು ಪತ್ತೆಯಾಗಿದೆ.


ಶುಕ್ರವಾರ ರಾತ್ರಿ, KA01ME9158 (2009 ಮಾದರಿ) ಫಿಯಾಟ್ ಲೀನಿಯಾ ಕಾರು ಹಠಾತ್ ಬೆಂಕಿ ಹೊತ್ತಿ ಉರಿದ ಘಟನೆ ವಿಂಡ್ಸರ್ ಮ್ಯಾನರ್ ಹತ್ತಿರ ಸಂಭವಿಸಿದೆ. ಕೊರಮಂಗಲದಿಂದ ಮೆಖ್ರಿ ಸರ್ಕಲ್ ಕಡೆಗೆ ತೆರಳುತ್ತಿದ್ದ ಕಾರಿಗೆ ಸಿಎಂ ನಿವಾಸದ ಹತ್ತಿರ ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ್, ಕಾರಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರು ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾದರು. ಬೆಂಕಿ ತೀವ್ರಗೊಂಡು ಕಾರು ಸಂಪೂರ್ಣ ಸುಟ್ಟು ಭಸ್ಮವಾಯಿತು. ಸ್ಥಳೀಯರು ಬೆಂಕಿ ಸಿಎಂ ಮನೆಯಿಂದ ಹತ್ತಿರದಲ್ಲೇ ಕಾಣಿಸಿಕೊಂಡಿದ್ದಕ್ಕೆ ಆತಂಕಗೊಂಡರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಪ್ರಾಥಮಿಕ ತನಿಖೆಯಲ್ಲಿ ಟೈರ್ ಮತ್ತು ಡೀಸೆಲ್ ಟ್ಯಾಂಕ್ ಸ್ಫೋಟವೇ ಕಾರಣ ಎಂದು ಶಂಕಿಸಲಾಗಿದೆ.

ಇದೇ ವೇಳೆ, ಡಿಸಿಎಂ ಮನೆಯಿಂದ ಹತ್ತಿರ ಮತ್ತೊಂದು ಅನುಮಾನಾಸ್ಪದ ಘಟನೆ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 7ರಂದು ಸದಾಶಿವನಗರದಲ್ಲಿ ಟೋಯಿಂಗ್ ವೇಳೆ ಶಂಕಾಸ್ಪದ ವೈಟ್ ಟೊಯೋಟಾ ಫಾರ್ಚುನರ್ ಕಾರು ಪತ್ತೆಯಾಗಿದೆ. ಕಾರಿನಲ್ಲಿ KA51MW6814 ನಕಲಿ ನಂಬರ್ಪ್ಲೇಟ್ ಇಟ್ಟುಕೊಳ್ಳಲಾಗಿತ್ತು. ಹಿಂಭಾಗದಲ್ಲಿ ಮತ್ತೊಂದು ನಂಬರ್ KA42P6606 ಅಳವಡಿಸಲಾಗಿತ್ತು, ಇದು ರಾಮನಗರ ಆರ್ಟಿಒ ಅಡಿಯಲ್ಲಿ ನೋಂದಾಯಿತ ಎಂದು ತಿಳಿದುಬಂದಿದೆ. ಮಾಲೀಕ ದೀಪಕ್ ಕಾರು ತಮ್ಮದೇ ಎಂದು ಒಪ್ಪಿಕೊಂಡಿದ್ದರೂ, ಐದು ದಿನ ಕಳೆದರೂ ವಾಹನವನ್ನು ವಶಕ್ಕೆ ಪಡೆಯಲು ಮುಂದಾಗಿಲ್ಲ.
ಸಿಎಂ ಮನೆ ಬಳಿ ಕಾರು ಬೆಂಕಿ ಮತ್ತು ಡಿಸಿಎಂ ಮನೆ ಹತ್ತಿರ ನಕಲಿ ನಂಬರ್ ಕಾರು ಪತ್ತೆ – ಈ ಎರಡೂ ಘಟನೆಗಳ ಹಿಂದೆ ಏನಾದರೂ ಸಂಚು ಇದೆಯಾ ಅಥವಾ ಸಾಮಾನ್ಯ ಘಟನೆಗಳಾ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಘಟನೆಯ ನಿಜಾಸ್ತಿತ್ವ ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ.
