ಬೆಂಗಳೂರು, ಸೆಪ್ಟೆಂಬರ್ 13: ನಗರದ ಸ್ವಚ್ಛತೆ ಮತ್ತು ಸುಂದರೀಕರಣಕ್ಕಾಗಿ ಪ್ರಜ್ಞಾವಂತರಾದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸ್ವತಃ ಜನತೆ ಮತ್ತು ಸ್ವಯಂಸೇವಕರ ಜೊತೆಗಿದ್ದು ಮೆಜೆಸ್ಟಿಕ್ ಸುತ್ತಮುತ್ತಲಿನ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡರು. ಏಪ್ರಾನ್ ತೊಟ್ಟು, ಕೈಗವಸು ಹಾಕಿಕೊಂಡು, ಪೊರಕೆ ಹಿಡಿದು ಕಸದ ಎತ್ತುವ ಕೆಲಸ ಮಾಡಿ, ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ತೆರವುಗೊಳಿಸಿ, ಬಣ್ಣ ಬಳಿದು ಆಕರ್ಷಕ ಸ್ಥಳವನ್ನಾಗಿಸಿದ ಅವರು, ಸ್ವಯಂಸೇವಕರ ಜೊತೆ ಪಾದಚಾರಿ ನೆಲದಲ್ಲಿ ಕುಳಿತು ಉಪಹಾರ ಸೇವಿಸಿ ನಾಗರಿಕರ ಭಾಗವಹಿಸುವಿಕೆ, ಸ್ವಚ್ಛ ಬೆಂಗಳೂರು, ಹಸಿರು-ಸುಂದರ ನಗರ ಎಂಬ ಸಂದೇಶವನ್ನು ನೀಡಿದರು.


ಚೋಳನ್ ಘೋಷಿಸಿದಂತೆ, ಮೆಜೆಸ್ಟಿಕ್ ಸುತ್ತಲಿನ 5–6 ಕಿಮೀ ಉದ್ದದ ಪಾದಚಾರಿ ಮಾರ್ಗವನ್ನು ಮಾದರಿ ಪಾದಚಾರಿ ಮಾರ್ಗವಾಗಿ ರೂಪಿಸುವ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಇದರಿಂದ ಪಾದಚಾರಿಗಳಿಗೆ ಸ್ನೇಹಿ, ಸ್ವಚ್ಛ ಮತ್ತು ಹಸಿರು ಮಾರ್ಗ ಸಿಗಲಿದೆ.
ತ್ವರಿತ ಪರಿಹಾರಕ್ಕೆ ಕ್ರಮ
ಇತ್ತೀಚೆಗೆ ಒಬ್ಬ ವಿದೇಶಿ ಇನ್ಫ್ಲೂಯೆನ್ಸರ್ ಹಂಚಿದ ವಿಡಿಯೋದಲ್ಲಿ ಮೆಜೆಸ್ಟಿಕ್ ಪಾದಚಾರಿ ಮಾರ್ಗದ ದುಸ್ಥಿತಿ ಬಯಲಾಯಿತು. ಅದನ್ನು ಗಂಭೀರವಾಗಿ ಪರಿಗಣಿಸಿದ ಚೋಳನ್ ತಕ್ಷಣವೇ ಅಧಿಕಾರಿಗಳಿಗೆ ಸ್ವಚ್ಛತಾ ಕಾರ್ಯಕ್ಕೆ ಸೂಚನೆ ನೀಡಿದರು. ಗಾಂಧಿನಗರ ವಿಭಾಗದ ಸಿಬ್ಬಂದಿ ಜೆಟ್ಟಿಂಗ್ ಯಂತ್ರ ಬಳಸಿ ಶೌಚವಾಸನೆ ನಿವಾರಣೆ ಮಾಡಿ, ಬ್ಲೀಚಿಂಗ್ ಪೌಡರ್ ಹಾಕಿ ಸಂಪೂರ್ಣ ಸ್ವಚ್ಛತೆ ನಡೆಸಿದರು. ನಂತರ ಗೋಡೆಗಳಿಗೆ ಬಣ್ಣ ಬಳಿದು ಸ್ಥಳವನ್ನು ಆಕರ್ಷಕವನ್ನಾಗಿಸಿದರು.

ಹಸಿರು-ಸುರಕ್ಷತೆಗೆ ಆದ್ಯತೆ
ಚೋಳನ್ ಅಧಿಕಾರಿಗಳಿಗೆ ಪಾದಚಾರಿ ಪಕ್ಕದಲ್ಲಿ ಸಸಿ ನೆಡುವುದು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಿದರು. ಅನಧಿಕೃತ ಓಎಫ್‌ಸಿ ಕೇಬಲ್‌ಗಳು, ಪೈಪ್‌ಗಳನ್ನು ತೆರವುಗೊಳಿಸಲು, ಆನಂದ್ ರಾವ್ ವೃತ್ತದ ಬಳಿ ಹಾಳಾಗಿರುವ ಚೇಂಬರ್ ಸ್ಲ್ಯಾಬ್‌ಗಳನ್ನು ಸರಿಪಡಿಸಲು ಆದೇಶಿಸಿದರು. ಸಾರ್ವಜನಿಕ ಶೌಚಾಲಯಗಳ ಬಳಿ ಶುಚಿತ್ವ ಕಾಪಾಡಿಕೊಳ್ಳಲು ಸೂಚಿಸಿದರು.

ನಾಗರಿಕರಿಂದ ಸಹಕಾರ ಅಗತ್ಯ
ಸಾರ್ವಜನಿಕ ಶೌಚಾಲಯಗಳು ಇದ್ದರೂ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಗೆ ತಡೆಯೊಡ್ಡಲು ನಾಗರಿಕರು ಸಹಕರಿಸಬೇಕು ಎಂದು ಅವರು ಒತ್ತಾಯಿಸಿದರು. ತೆಂಗಿನಕಾಯಿ ಮಾರುವವರು ತೊಲೆಗಳನ್ನು ರಸ್ತೆ ಬದಿಯಲ್ಲಿ ಹಾಕದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು 50ಕ್ಕೂ ಹೆಚ್ಚು ಸ್ವಯಂಸೇವಕರು ಈ ಅಭಿಯಾನದಲ್ಲಿ ಪಾಲ್ಗೊಂಡರು. ಸುಮಾರು 40 ಲೀಟರ್ ಬಣ್ಣ ಬಳಿದು ಪಾದಚಾರಿ ಮಾರ್ಗ ಸುಂದರಗೊಳಿಸಲಾಯಿತು.