ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿರುವ ಭೀಕರ ಘಟನೆಯಲ್ಲಿ ವಿಜ್ಞಾನನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್ನಲ್ಲಿ ಸ್ವಂತ ಮಗನೇ ತಂದೆ ತಾಯಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಘಟನೆ HAL ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಸುಮಾರು 7:30ರ ವೇಳೆಗೆ ನಡೆದಿದೆ.
ಮೃತರನ್ನು ನಿವೃತ್ತ ನೌಕಾಪಡೆ ಕ್ಯಾಪ್ಟನ್ ನವೀನ್ ಚಂದ್ರ ಭಟ್ (60) ಹಾಗೂ ದಂತ ವೈದ್ಯೆ ಡಾ. ಶ್ಯಾಮಲಾ ಭಟ್ (55) ಎಂದು ಗುರುತಿಸಲಾಗಿದೆ. ಆರೋಪಿಯಾಗಿ ಮಗ ರೋಹನ್ ಭಟ್ (ಸಾಫ್ಟ್ವೇರ್ ಇಂಜಿನಿಯರ್) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಬೆಳಿಗ್ಗೆ ಮೂವರ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ರೋಹನ್ ಚಾಕುವಿನಿಂದ ತಂದೆ ತಾಯಿಗೆ ಇರಿದಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಮೃತ ದಂಪತಿಯ ಮಗಳು ಅಮೆರಿಕಾದಲ್ಲಿ ವಾಸವಾಗಿದ್ದು, ಘಟನೆ ಕುರಿತು ಮಾಹಿತಿ ನೀಡಲಾಗಿದೆ. ಅವರು ಬೆಂಗಳೂರಿಗೆ ಆಗಮಿಸಿದ ನಂತರ ಅಂತ್ಯಕ್ರಿಯೆ ಮತ್ತು ಮರಣೋತ್ತರ ಪರೀಕ್ಷೆ ಸಂಬಂಧಿತ ಕ್ರಮಗಳು ಮುಂದುವರಿಯಲಿವೆ. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಆರೋಪಿಯಾದ ರೋಹನ್ ಭಟ್ರನ್ನು HAL ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಿಕೊಂಡಿದ್ದರೂ, ಹಣಕಾಸು ವಿಚಾರ ಅಥವಾ ಇತರ ಕಾರಣಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
