
ಬೆಂಗಳೂರು: ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಮೇಲೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೇಟೆ ನಡೆಸಿ ಭಾರೀ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ. 1.01 ಕೋಟಿ ರೂಪಾಯಿ ಹಣ ದೋಚಲು ಬಂದಿದ್ದ ಎಂಟು ಮಂದಿಯನ್ನು ಹುಳಿಮಾವು ಠಾಣೆ ಪೊಲೀಸರು ಕೇವಲ ಎರಡು ಗಂಟೆ ಅವಧಿಯಲ್ಲೇ ಬಂಧಿಸಿದ್ದಾರೆ.

ಘಟನೆ ಅಕ್ಷಯನಗರ, ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಮೀನು ಖರೀದಿ ವ್ಯವಹಾರಕ್ಕಾಗಿ ಮೋಟಾರಾಮ್ ದಂಪತಿ ತಮ್ಮ ಕಾರಿನಲ್ಲಿ ₹1.01 ಕೋಟಿ ಹಣವನ್ನು ತಂದು ಹೇಮಂತ್ ಎಂಬಾತನಿಗೆ ನೀಡಲು ಸಿದ್ದರಾಗಿದ್ದರು. ಡಿಎಲ್ಎಫ್ ಸರ್ಕಲ್ ಬಳಿ ಕಾರಿನ ಡಿಕ್ಕಿ ತೆಗೆಯುವಷ್ಟರಲ್ಲಿ ಇಬ್ಬರು ಬೈಕ್ ಸವಾರರು ಬಂದರು, ಬಳಿಕ ಇನ್ನೂ ನಾಲ್ಕೈದು ಬೈಕ್ ಸವಾರರ ಗ್ಯಾಂಗ್ ಕಾರನ್ನು ಸುತ್ತುವರಿದು ದಂಪತಿಗೆ ಬೆದರಿಕೆ ಹಾಕಿ ಚೀಲದಲ್ಲಿದ್ದ ಹಣ ಎಗರಿಸಿದರು.

ಹೇಮಂತ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸಮೀಪದಲ್ಲೇ ಪೆಟ್ರೋಲ್ ಮಾಡುತ್ತಿದ್ದ ಹುಳಿಮಾವು ಪೊಲೀಸರು ಅಲರ್ಟ್ ಆಗಿ ಬೆನ್ನಟ್ಟಿದರು. ಇಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ.ನಾರಾಯಣ ತಿಳಿಸಿದ್ದಾರೆ: “ನಾವು ಸ್ಥಳಕ್ಕೆ ದೌಡಾಯಿಸಿದಾಗ ಎರಡು ಕಾರು, ಹಲವು ಬೈಕ್ಗಳು ಮತ್ತು ಎಂಟು ಜನರು ಖಾಲಿ ಪ್ರದೇಶದಲ್ಲಿ ಇದ್ದರು. ಪೊಲೀಸರು ಬಂದಿದ್ದು ನೋಡಿ ಗಾಬರಿಗೊಂಡು ಓಡಲು ಯತ್ನಿಸಿದರು. ನಮ್ಮ ಸಿಬ್ಬಂದಿ ಅವರನ್ನು ಬೆನ್ನಟ್ಟಿ ಹಿಡಿದುಕೊಂಡರು.”

ಪೊಲೀಸರ ಚುರುಕು ಕಾರ್ಯಾಚರಣೆಯಿಂದ ₹1.01 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಕೆಲವೇ ನಿಮಿಷ ತಡವಾಗಿದ್ದರೆ ಹಣ ಮರೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಹಿನ್ನಲೆ ಮತ್ತು ಇತರ ದರೋಡೆ ಪ್ರಕರಣಗಳ ಸಂಪರ್ಕಗಳ ಕುರಿತು ಈಗ ವಿಚಾರಣೆ ನಡೆಯುತ್ತಿದೆ.