ಬೆಂಗಳೂರು: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಕುರಿತ ರಾಜಕೀಯ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಸಂಸದ ತೇಜಸ್ವಿ ಸೂರ್ಯ ನಡೆಸಿದ ‘ಖಾಲಿ ಟ್ರಂಕ್’ ಪ್ರತಿಭಟನೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಮೆಟ್ರೋ ದರ ಪರಿಷ್ಕರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಕಾರಣ ನೀಡಿ ದರ ಏರಿಕೆಗೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ತೇಜಸ್ವಿ ಸೂರ್ಯ ಆರ್.ವಿ.ರೋಡ್ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ತಾತ್ಕಾಲಿಕ ಸ್ಥಗಿತ; ಬೋರ್ಡ್ ಪರಿಶೀಲನೆ ಬಳಿಕ ತೀರ್ಮಾನ
ಈ ಆರೋಪಗಳನ್ನು ತಳ್ಳಿ ಹಾಕಿದ ರಾಮಲಿಂಗ ರೆಡ್ಡಿ, ಮೆಟ್ರೋ ದರ ನಿಗದಿ ಪ್ರಕ್ರಿಯೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ರಚಿಸಲಾದ ಫೇರ್ ಫಿಕ್ಸೇಶನ್ ಕಮಿಟಿ ಮೂಲಕ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಸಮಿತಿಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡುತ್ತದೆ ಮತ್ತು ಅಂತಿಮ ತೀರ್ಮಾನವೂ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಅವರು ಹೇಳಿದರು.
“ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಪರಿಣಿತರು. ಸುಳ್ಳು ಹೇಳದೆ ಅವರಿಗೆ ನಿದ್ರೆ ಬರುವುದಿಲ್ಲ,” ಎಂದು ರಾಮಲಿಂಗ ರೆಡ್ಡಿ ಕಿಡಿಕಾರಿದರು. ತೇಜಸ್ವಿ ಸೂರ್ಯ ನಡೆಸಿದ ಪ್ರತಿಭಟನೆಯನ್ನು ರಾಜಕೀಯ ನಾಟಕ ಎಂದು ಬಣ್ಣಿಸಿದ ಅವರು, “ಡ್ರಾಮಾ ರಾಜಕೀಯ ಬಿಟ್ಟು ಡ್ರಾಮಾ ಕಂಪನಿಗೆ ಸೇರಿಕೊಂಡರೆ ಚೆನ್ನಾಗಿರುತ್ತದೆ” ಎಂದು ವ್ಯಂಗ್ಯವಾಡಿದರು.
ಮೆಟ್ರೋ ದರ ವಿಚಾರವಾಗಿ ಸಾರ್ವಜನಿಕ ಸಾರಿಗೆ ಮತ್ತು ಪ್ರಯಾಣಿಕರ ಹಿತದ ವಿಚಾರ ಮುಂದುವರಿದಿರುವ ನಡುವೆಯೇ, ಬಿಜೆಪಿ–ಕಾಂಗ್ರೆಸ್ ನಡುವಿನ ಆರೋಪ-ಪ್ರತ್ಯಾರೋಪಗಳು ರಾಜಕೀಯ ವಾತಾವರಣವನ್ನು ಮತ್ತಷ್ಟು ಬಿಸಿಮಾಡಿವೆ.
