ಬೆಂಗಳೂರು, ಮಾರ್ಚ್ 16: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾಮಾನ್ಯ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಪರಿಷ್ಕೃತ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಮತ್ತು ಮನವಿಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಐದು ನಗರ ಪಾಲಿಕೆಗಳ ಸಾಮಾನ್ಯ ಚುನಾವಣೆ–2026ಗಾಗಿ ವಾರ್ಡ್ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು 09.03.2026 ರಂದು ಪ್ರಕಟಿಸಲಾಗಿದೆ.
ಈ ಕರಡು ಮತದಾರರ ಪಟ್ಟಿಯ ಪ್ರತಿಗಳು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ (AERO) ಕಚೇರಿಗಳಲ್ಲಿಯೂ ಹಾಗೂ ಸಂಬಂಧಿತ ವಾರ್ಡ್ ಕಚೇರಿಗಳಲ್ಲಿಯೂ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿವೆ.
ಮತದಾರರು ತಮ್ಮ ಹೆಸರನ್ನು ಜಿಬಿಎ ಅಧಿಕೃತ ವೆಬ್ಸೈಟ್
https://gba.karnataka.gov.in/electoral2026
ನಲ್ಲಿ “Search Tool by Name” ಆಯ್ಕೆಯ ಮೂಲಕ ಪರಿಶೀಲಿಸಬಹುದು.
ಆದ್ಯದಲ್ಲಿ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮನವಿ ಮತ್ತು ಆಕ್ಷೇಪಣೆ ಸಲ್ಲಿಸಲು 10.03.2026 ರಿಂದ 16.03.2026ರವರೆಗೆ ಸಮಯ ನೀಡಲಾಗಿತ್ತು.
ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಕರಡು ಮತದಾರರ ಪಟ್ಟಿಯ ಪ್ರಕಟಣೆ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮತ್ತು ಆಕ್ಷೇಪಣೆ ಸಲ್ಲಿಸಲು ಗಡುವನ್ನು ವಿಸ್ತರಿಸುವಂತೆ ಏಕಮತದಿಂದ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಾರ್ವಜನಿಕರ ಮತ್ತು ಮತದಾರರ ಅನುಕೂಲಕ್ಕಾಗಿ ಆಕ್ಷೇಪಣೆ ಮತ್ತು ಮನವಿ ಸಲ್ಲಿಸುವ ಅಂತಿಮ ಗಡುವನ್ನು ಮಾರ್ಚ್ 26, 2026ರವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ನಿಗದಿತ ಅವಧಿಯೊಳಗೆ ತಿದ್ದುಪಡಿ ಮನವಿ ಸಲ್ಲಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
