
ಬೆಂಗಳೂರು: ನಗರದ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದಾಗ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿ ಧನುಶ್ರೀ ದುರ್ಮರಣ ಹೊಂದಿದ್ದಾರೆ. ಘಟನೆ ಸೆಪ್ಟೆಂಬರ್ 29, ಸೋಮವಾರ ಬೆಳಗ್ಗೆ ನಡೆದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಧನುಶ್ರೀ ಕಾಲೇಜಿಗೆ ತೆರಳುವಾಗ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದು, ನೆಲಕ್ಕೆ ಬಿದ್ದಿದ್ದ ಧನುಶ್ರೀಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಸ್ಥಳಕ್ಕೆ ಕೆ.ಆರ್.ಪುರಂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧನುಶ್ರೀಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಅವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.