ಬೆಂಗಳೂರು: ಬದಲಾದ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಇತರ ಅಂಶಗಳ ಪರಿಣಾಮವಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಹಲವು ಕಿಮೋಥೆರಪಿ ಔಷಧಿಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಿದೆ. ಆದಾಗ್ಯೂ, ಚಿಕಿತ್ಸೆ ವೆಚ್ಚವನ್ನು ಬಡವರ ಕೈಗೆಟಕುವ ಮಟ್ಟಕ್ಕೆ ತರುವ ಸಲುವಾಗಿ ಹೆಚ್ಚಿನ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಸಿ.ಎನ್. ಮಂಜುನಾಥ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಇಮ್ಯೂನೋಥೆರಪಿ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಹಾಗೂ ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಿದರು.
ಪ್ರಸ್ತುತ, ಒಬ್ಬ ರೋಗಿಗೆ ಇಮ್ಯೂನೋಥೆರಪಿ ಚಿಕಿತ್ಸೆಗೆ ₹20 ಲಕ್ಷದಿಂದ ₹50 ಲಕ್ಷದವರೆಗೆ ವೆಚ್ಚವಾಗುತ್ತಿದೆ, ಇದು ಬಹುಪಾಲು ಜನರಿಗೆ ಅಸಾಧ್ಯ. ಸುಂಕ ವಿನಾಯಿತಿಯಿಂದ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ತಗ್ಗಿ, ಲಕ್ಷಾಂತರ ಬಡ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಲಿದೆ ಎಂದು ಸಂಸದರು ಹೇಳಿದರು.
ಈ ಕ್ರಮವು ಕುಟುಂಬಗಳ ಆರ್ಥಿಕ ಭಾರವನ್ನು ಕಡಿಮೆ ಮಾಡುವುದಲ್ಲದೆ, ಕ್ಯಾನ್ಸರ್ ವಿರುದ್ಧ ಭಾರತದ ಹೋರಾಟವನ್ನು ಬಲಪಡಿಸಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾಧ್ಯವಾದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.