ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಜಕ್ಕಸಂದ್ರದ ವೆಂಕಟಪುರ 6ನೇ ಅಡ್ಡರಸ್ತೆ, ವಾರ್ಡ್ ನಂ.173 ರಲ್ಲಿ ಬಿರುಕು ಬಿಟ್ಟಿದ್ದ ಮತ್ತು ಅನಧಿಕೃತವಾಗಿ ನಿರ್ಮಿಸಲ್ಪಟ್ಟ ಕಟ್ಟಡವನ್ನು ತೆರವುಗೊಳಿಸಲು ಆದೇಶ ಹೊರಡಿಸಿದೆ. ಕಟ್ಟಡದ ಮಾಲೀಕರಾದ ಶಾಂತಮ್ಮ (ಪತಿ ಲಕ್ಷ್ಮಣ) ಅವರು ಈಗಾಗಲೇ ಸ್ವಂತ ವೆಚ್ಚದಲ್ಲಿ ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ಪ್ರಕಾರ, ಸ್ವತ್ತು ಸಂಖ್ಯೆ 17/ಬಿ ಜಕ್ಕಸಂದ್ರ ವ್ಯಾಪ್ತಿಯ ಈ ಕಟ್ಟಡವು ದಿನನಿತ್ಯದ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ನಕ್ಷೆ ಮಂಜೂರಾತಿ ಅಥವಾ ದಾಖಲೆಗಳನ್ನು ಮಾಲೀಕರು ಸಲ್ಲಿಸಿರಲಿಲ್ಲ. ಇದರ ಪರಿಣಾಮ, 2020ರ BBMP ಕಾಯ್ದೆಯ ಸೆಕ್ಷನ್ 313 ಅಡಿ ಆಗಸ್ಟ್ 2, 2024 ರಂದು ಮೊದಲ ನೋಟಿಸ್ ನೀಡಲಾಗಿತ್ತು.


ನಂತರ, ಆಗಸ್ಟ್ 13, 2024 ರಂದು ಸೆಕ್ಷನ್ 248(1) ಮತ್ತು 248(2) ಅಡಿಯಲ್ಲಿ ಕಟ್ಟಡವನ್ನು ಅನಧಿಕೃತವೆಂದು ಘೋಷಿಸಿ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಯಿತು. ಆದರೆ, ಮಾಲೀಕರು ಈ ಬಗ್ಗೆ ಸ್ಪಷ್ಟನೆ ನೀಡಲಿಲ್ಲ.
ಅದಾದ ನಂತರ, ಸೆಪ್ಟೆಂಬರ್ 13, 2024 ರಂದು ಮಾಲೀಕರು ಕಟ್ಟಡವನ್ನು ಸುರಕ್ಷಿತವಾಗಿ ತೆರವುಗೊಳಿಸಲು ಸಮಯಾವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಕಟ್ಟಡದ ಅಡಿಪಾಯದಲ್ಲಿ ಹೊಸ ಬಿರುಕುಗಳು ಕಂಡುಬಂದ ಹಿನ್ನೆಲೆಯಲ್ಲಿ, ಮಾಲೀಕರು ಮತ್ತೆ ಸೆಪ್ಟೆಂಬರ್ 25, 2025 ರಂದು ಮನವಿ ಸಲ್ಲಿಸಿ, ಕಟ್ಟಡವನ್ನು ಸ್ವಂತ ವೆಚ್ಚದಲ್ಲಿ ತೆರವುಗೊಳಿಸಲು ಅನುಮತಿ ಕೋರಿ ಪತ್ರ ನೀಡಿದ್ದಾರೆ.
ಸ್ಥಳ ಪರಿಶೀಲನೆಯ ನಂತರ, ಪಾಲಿಕೆ ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮಗೊಳಿಸಲು ಷರತ್ತು ಮತ್ತು ನಿಯಮಗಳೊಂದಿಗೆ ಅನುಮತಿ ನೀಡಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು, “ಮಾಲೀಕರು ಕಾರ್ಯವನ್ನು ವಿಳಂಬ ಮಾಡಿದರೆ ಅಥವಾ ತೆರವುಗೊಳಿಸದಿದ್ದರೆ, ಪಾಲಿಕೆ ನೇರವಾಗಿ ಕಟ್ಟಡವನ್ನು ನೆಲಸಮಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲು ಮಾಡಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ಸ್ಪಷ್ಟಪಡಿಸಿರುವಂತೆ, ಈ ಪ್ರಕರಣವು ಮೊದಲಿನಿಂದ BBMP ವ್ಯಾಪ್ತಿಯಲ್ಲಿದ್ದರೂ, ಈಗ ಅದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಬರುವುದರಿಂದ, ಎಲ್ಲಾ ಕ್ರಮಗಳನ್ನು ಪಾಲಿಕೆಯ ಕೈಗೊಂಡಿದೆ.
