ಚಿತ್ರದುರ್ಗ, ಎ.7: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಳಲ್ಕೆರೆ ತಾಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಬಳಿ ರವಿವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ಬಸ್ಸಿನಲ್ಲಿ 38 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಮುಂಜಾನೆ 4 ಗಂಟೆ ಸುಮಾರಿಗೆ ಕಣಿವೆ ಆಂಜನೇಯ ದೇವಸ್ಥಾನದ ಬಳಿ ತಲುಪಿದಾಗ ಈ ಅಪಘಾತ ಸಂಭವಿಸಿದೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಬಸ್ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ.
ಬಸ್ಸಿನಲ್ಲಿ ಒಟ್ಟು 50 ಪ್ರಯಾಣಿಕರಿದ್ದು, ಈ ಪೈಕಿ 38 ಮಂದಿ ಗಾಯಗೊಂಡಿದ್ದು, ಅವರಿಗೆ ಹೊಳಲ್ಕೆರೆ ತಾಲೂಕಿನ ಸರಕಾರಿ ಅಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.