ಬೆಂಗಳೂರು (ಕರ್ನಾಟಕ ವಾರ್ತೆ):
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲೆ ನಡೆದ ಅನಾಗರೀಕ ಘಟನೆಯ ಕುರಿತು ದಿನಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಮತ್ತು ಲೇಖನಗಳ ಬಗ್ಗೆ ಕರ್ನಾಟಕ ಉಚ್ಛ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಂತ್ರಸ್ಥರನ್ನು ಬಳಸಿಕೊಂಡು ಸುದ್ದಿ ಪ್ರಸಾರ ಮಾಡಿರುವುದಕ್ಕೆ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈಗಾಗಲೇ ಸಂತ್ರಸ್ಥೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ನಿಯೋಗ ಭೇಟಿಯಾಗುವ ಸುದ್ದಿ ಟೈಮ್ಸ್ ನೌ ಟಿವಿ (Times Now) ವಾಹಿನಿಯಲ್ಲಿ ಬಿತ್ತರಗೊಂಡಿರುವ ಕುರಿತು ನ್ಯಾಯಾಲಯದ ಗಮನಕ್ಕೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲವು ತೀವ್ರ ವಿಷಾದವನ್ನು ವ್ಯಕ್ತಪಡಿಸಿದೆ.



ಈ ಪ್ರಕರಣದಲ್ಲಿ ನೊಂದ ಸಂತ್ರಸ್ತೆಯ ದೈಹಿಕ / ಮಾನಸಿಕ ಪರಿಸ್ಥಿತಿಯನ್ನು ಅವಲೋಕಿಸಿ ಸ್ಥಳೀಯ ವೈದ್ಯಾಧಿಕಾರಿಗಳ ಅಥವಾ ಅವರಿಗೆ ಚಿಕಿತ್ಸೆ ನೀಡುವ ವೈದ್ಯರ ಪೂರ್ವಾನುಮತಿ ಇಲ್ಲದೇ ಯಾವುದೇ ವ್ಯಕ್ತಿ, ಗುಂಪು, ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಭೇಟಿಯಾಗುವಂತಿಲ್ಲ. ಮುಂದುವರೆದು ಸಂತ್ರಸ್ತೆಯ ಕುಟುಂಬಸ್ಥರು, ಶಾಸನಬದ್ಧ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಆದೇಶವನ್ನು ಹೊರಡಿಸಿರುತ್ತಾರೆ.