ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಟ್ರಾಲಿ ಎಳೆಯುವ ಕೆಲಸ ಮಾಡುತ್ತಿದ್ದ ರಾಮಕೃಷ್ಣ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ.
ತುಮಕೂರಿನ ಮಧುಗಿರಿ ಮೂಲಕ ರಮೇಶ್ ಎಂಬಾತನೇ ಈ ಕೊಲೆ ಮಾಡಿದಾತ. ಬಿಎಂಟಿಸಿ ಬಸ್‌ನಲ್ಲಿ ವಿಮಾನ ನಿಲ್ದಾಣದಕ್ಕೆ ಬಂದ ರಮೇಶ್, ರಾಮಕೃಷ್ಣ ಜೊತೆ ಜಗಳ ತೆಗೆದಿದ್ದಾನೆ. ನಂತರ ಅಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ರಾಮಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲಿಯೇ ಇದ್ದ ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.