ವೃಷಭಾವತಿ ನದಿ ಉಗಮ ಸ್ಥಾನಕ್ಕೆ ಮರುಜೀವ
ಬೆಂಗಳೂರು, ನ.25: “ವೃಷಭಾವತಿ ನದಿ ಹುಟ್ಟುವ ಜಾಗಕ್ಕೆ ಮರುಜೀವ ನೀಡಿ, ಜೀವನದಿಯಾಗಿ ರೂಪಿಸಬೇಕು ಹಾಗೂ ಬಸವನಗುಡಿ ಭಾಗವನ್ನು ಬ್ರಾಂಡ್ ಬೆಂಗಳೂರು ಅಡಿಯಲ್ಲಿ ಧಾರ್ಮಿಕ ಹಾಗೂ ಪಾರಂಪರಿಕ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಬೇಕು ಎನ್ನುವ ಸ್ಥಳೀಯ ಮುಖಂಡರ ಮನವಿಗೆ ಸರ್ಕಾರ ಸ್ಪಂದಿಸುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಶಿವಕುಮಾರ್ ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.
“ಕಡಲೆಕಾಯಿ ಪರಿಷೆಯನ್ನು ಅಂತರರಾಷ್ಟೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಶ್ರಮಿಸಬೇಕು. ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಈ ಬಾರಿ ಸುಂಕ ಸಂಗ್ರಹವನ್ನು ರದ್ದು ಮಾಡಿದ್ದೇವೆ. ಈ ವರ್ಷದಿಂದ ಸುಂಕವಿಲ್ಲದ ಕಡಲೆಕಾಯಿ ಪರಿಷೆ ಪ್ರಾರಂಭವಾಗಿದೆ” ಎಂದರು.
“ನಮ್ಮ ಅಜ್ಜನ ಕಾಲದಿಂದಲೂ ನಾವು ಕಡಲೆಕಾಯಿ ಬೆಳೆಯುತ್ತಿದ್ದೆವು. ಸುಮಾರು 30- 40 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದೆವು. ನಾನೂ ಸಹ ಕಡಲೆಕಾಯಿ ಕೃಷಿ ಮಾಡಿದ್ದೇನೆ. ಕಡಲೆಕಾಯಿ ಬಡವರ ಬಾದಾಮಿ. ಒಂದು ಕೆಜಿ ಬಾದಾಮಿಗೆ ಒಂದು ಸಾವಿರ ರೂಪಾಯಿ, ಅದೇ ಕಡಲೆಕಾಯಿಗೆ 50 ರೂಪಾಯಿ ಬೆಲೆಯಿದೆ” ಎಂದರು.
“ಕಾಂಗ್ರೆಸ್ ಕಡಲೆಕಾಯಿ ಎಂದು ಕರೆಯಲಾಗುತ್ತದೆ. ಯಾರು ಈ ಹೆಸರು ಇಟ್ಟರು ಎಂಬುದು ಮಾಹಿತಿಯಿಲ್ಲ. ಮಹಾತ್ಮ ಗಾಂಧಿ ಅವರು ಇಟ್ಟಿರಬಹುದು ಎನ್ನುವುದು ನನ್ನ ಅಭಿಪ್ರಾಯ. ಚಿಂತಾಮಣಿಯಲ್ಲಿ ಖಾರ ಹಾಕಿ ಕಡಲೆಕಾಯಿಗೆ ಹೊಸ ರೂಪ ನೀಡುತ್ತಾರೆ. ಕನಕಪುರದಲ್ಲಿ ಕಡಲೆ ಮಿಠಾಯಿ ಮಾಡುತ್ತಾರೆ. ತುಮಕೂರು ಭಾಗದಲ್ಲಿ ವಿವಿಧ ಜಾತಿಯ ಕಡಲೆಕಾಯಿ ತಳಿಗಳಿವೆ. ನಾನು ಒಮ್ಮೆ ವಿದೇಶಕ್ಕೆ ಹೋದಾಗ ಹೆಬ್ಬೆಟ್ಟು ಗಾತ್ರದ ಕಡಲೆಕಾಯಿ ನೋಡಿದ್ದೆ. ಅದನ್ನು ಭಾರತಕ್ಕೆ ಕಳುಹಿಸಿ, ನಾನು ಬೆಳೆಯಬೇಕು ಎಂದು ಸ್ನೇಹಿತರಿಗೆ ತಿಳಿಸಿದ್ದೆ ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ” ಎಂದು ಹೇಳಿದರು.
“ಬೆಂಗಳೂರಿನ ಸುತ್ತಲಿನ ರೈತರು ಇಲ್ಲಿ ಬಂದು, ನಮ್ಮ ಶ್ರಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದೀರಿ. ಕೆಂಪೇಗೌಡರು ರೈತರನ್ನು ಉಳಿಸಲು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ನಡೆಯೋಣ. ವೃಷಭಾವತಿ ನದಿ ಜನಿಸುವ ಸ್ಥಳದಲ್ಲಿ ನಿಂತು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸದಲ್ಲಿ ನಾವೆಲ್ಲರೂ ನಿರತರಾಗಿದ್ದೇವೆ. ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಮಲ್ಲಿಕಾರ್ಜುನ ಸ್ವಾಮಿ, ಗವಿ ಗಂಗಾಧರೇಶ್ವರ, ಆಂಜನೇಯ, ಬಸವೇಶ್ವರ, ಗಣಪತಿ ದೇವರುಗಳ ಸನ್ನಿಧಾನದಲ್ಲಿ ನಾವೆಲ್ಲರೂ ಸೇರಿರುವುದೇ ನಮ್ಮ ಭಾಗ್ಯ.
ಬ್ರಾಂಡ್ ಬೆಂಗಳೂರಿಗೆ ಟೀಕೆ; ಸೂಕ್ತ ಕಾಲದಲ್ಲಿ ಉತ್ತರ
“ವಿರೋಧ ಪಕ್ಷದ ನಾಯಕರು ಬ್ರಾಂಡ್ ಬೆಂಗಳೂರು ಬಗ್ಗೆ ಟೀಕೆ ಮಾಡಿದ್ದರು. ಇದಕ್ಕೆ 2028ಕ್ಕೆ ಮುಂಚಿತವಾಗಿ ನಾನು ಉತ್ತರ ನೀಡುತ್ತೇನೆ. ಈ ಯೋಜನೆಯಡಿ ಯಾವ ಕೆಲಸಗಳನ್ನು ಮಾಡಿದ್ದೇನೆ, ಮಾಡಲಿದ್ದೇನೆ ಎಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ” ಎಂದರು.
“ದೇವರು ವರ, ಶಾಪ ಎರಡೂ ಕೊಡುವುದಿಲ್ಲ. ಆದರೆ ಕೊಟ್ಟಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾನವನ ಧರ್ಮಕ್ಕೆ ಜಯವಾಗಲಿ ಎಂದು ಹಿರಿಯರು ಸಂದೇಶ ಕೊಟ್ಟಿದ್ದಾರೆ” ಎಂದು ಹೇಳಿದರು.
ಎಲ್ಲಾ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಲಾಗುವುದು
ಕಡಲೆಕಾಯಿ ಪರಿಷೆ ಉದ್ಘಾಟನೆಯ ನಂತರ ಪಡಿತರ ಚೀಟಿ ರದ್ದತಿ ಬಗ್ಗೆ ಬಿಜೆಪಿ ಅಪಪ್ರಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ ಅವರು “ನಮ್ಮ ಸರ್ಕಾರ ಬಡವರ ಪರವಾಗಿದೆ. ಎಲ್ಲಾ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಲಾಗುವುದು. ಇದರ ಬಗ್ಗೆ ಆತಂಕ ಪಡುವ ಆಗತ್ಯವಿಲ್ಲ, ಯಾರಿಗೂ ತೊಂದರೆಯಾಗಲು ಬಿಡುವುದಿಲ್ಲ. ಸರ್ಕಾರ ಜಮೀನು ಕಬಳಿಸುತ್ತದೆ ಎನ್ನುವ ಬಿಜೆಪಿ ಅಪಪ್ರಚಾರವನ್ನು ಬಿಟ್ಟುಬಿಡಿ” ಎಂದರು.